ವೆಸ್ಟ್ ಇಂಡೀಸ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದ್ದ ಟೀಂ ಇಂಡಿಯಾ (India vs West Indies) ಸೋಲಿನೊಂದಿಗೆ ಅಂತ್ಯಗೊಳಿಸಿದೆ. ವಿಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ಭಾರತಕ್ಕೆ ಟಿ20 ಸರಣಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಯುವ ಪಡೆಯನ್ನು ಕಣಕ್ಕಿಳಿಸಿದ್ದ ಆಯ್ಕೆ ಮಂಡಳಿಗೆ ಸರಣಿ ಸೋಲಿನ ಶಾಕ್ ಎದುರಾಗಿದೆ. ಈ ಟಿ20 ಸರಣಿಯಲ್ಲಿ ಟೀಂ ಇಂಡಿಯಾ (Team India) ಪರ ಕೆಲವು ಆಟಗಾರರು ಅಂತಾರಾಷ್ಟ್ರೀಯ ಟಿ20 ಸರಣಿಗೆ ಪದಾರ್ಪಣೆ ಮಾಡಿದರು. ಅದರಲ್ಲಿ ಕೆಲವರು ಆಯ್ಕೆ ಮಂಡಳಿಯ ನಂಬಿಕೆಯನ್ನು ಉಳಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದರೆ ಈ ಟಿ20 ಸರಣಿಯಿಂದ ಟೀಂ ಇಂಡಿಯಾಕ್ಕೆ ಆದ ಅನುಕೂಲವೆಂದರೆ ಅದು ತಿಲಕ್ ವರ್ಮಾ (Tilak Varma) ರೂಪದಲ್ಲಿ ಒಬ್ಬ ಅತ್ಯುತ್ತಮ ಆಲ್ರೌಂಡರ್ ಸಿಕ್ಕಿದ್ದು.
ಚುಟುಕು ಮಾದರಿಯಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ತಿಲಕ್, ಮೊದಲ ಸರಣಿಯಲ್ಲೇ ಗಮನ ಸೆಳೆದರು. ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾದರೂ, ಚೊಚ್ಚಲ ಅವಕಾಶ ಪಡೆದಿದ್ದ ತಿಲಕ್ ಮಾತ್ರ ತಂಡದ ಪರ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಅಂತಾರಾಷ್ಟ್ರೀಯ ಪಂದ್ಯದ ಎರಡನೇ ಎಸೆತದಲ್ಲಿಯೇ ಸಿಕ್ಸರ್ ಸಿಡಿಸುವ ಮೂಲಕ ವೃತ್ತಿ ಜೀವನವನ್ನು ಶುಭಾರಂಭ ಮಾಡಿದ್ದ ತಿಲಕ್, ಈ ಟಿ20 ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆಡಿದ 5 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ ತಿಲಕ್ 173 ರನ್ ಕಲೆಹಾಕಿದರು.
ಇದರ ಹೊರತಾಗಿಯೂ ತಿಲಕ್ ಬ್ಯಾಟಿಂಗ್ ಮಾತ್ರವಲ್ಲದೆ ಕೊನೆಯ ಟಿ20 ಪಂದ್ಯದಲ್ಲಿ ಬೌಲಿಂಗ್ನಲ್ಲೂ ತಮ್ಮ ಕೈಚಳಕ ತೋರಿದರು. ಐದನೇ ಟಿ20 ಪಂದ್ಯದಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ ತಿಲಕ್, ತಾನು ಬೌಲ್ ಮಾಡಿದ ಮೊದಲ ಓವರ್ನ ಎರಡನೇ ಎಸೆತದಲ್ಲೇ ಪ್ರಮುಖ ವಿಕೆಟ್ ಪಡೆದರು. ವಾಸ್ತವವಾಗಿ ಆರಂಭಿಕ ಆಘಾತದಿಂದ ತಂಡವನ್ನು ಹೊರತೆಗೆದ ನಿಕೋಲಸ್ ಪೂರನ್ ಮತ್ತು ಬ್ರೆಂಡನ್ ಕಿಂಗ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಅಲ್ಲದೆ ಇಬ್ಬರ ನಡುವೆ 107 ರನ್‌ಗಳ ಜೊತೆಯಾಟವೂ ನಡೆಯುತ್ತಿತ್ತು. ಈ ಶತಕದ ಜೋಡಿಯನ್ನು ಮುರಿಯಲು ಹಾರ್ದಿಕ್ ಚೆಂಡನ್ನು ತಿಲಕ್ ಕೈಗೆ ನೀಡಿದರು.
Whatever he touches turns to gold 👌🔥
Tilak Varma 👊 can’t do no wrong as he picks up the big wicket of Nicholas Pooran ☝️ #WIvIND #SabJawaabMilenge #JioCinema pic.twitter.com/5lFHAP4lml
— JioCinema (@JioCinema) August 13, 2023
ನಾಯಕನ ನಂಬಿಕೆಯನ್ನು ಉಳಿಸಿಕೊಂಡ ತಿಲಕ್ ಅವರ ಓವರ್ನ ಎರಡನೇ ಎಸೆತವನ್ನು ಪೂರನ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್‌ಗೆ ತಾಗಿ ಸ್ಲಿಪ್ನಲ್ಲಿದ ಫೀಲ್ಡರ್ ಕೈ ಸೇರಿತು. ಆದರೆ ಅಂಪೈರ್ ಮೊದಲು ನಿಕೋಲಸ್ ಪೂರನ್ ಔಟೆಂದು ತೀರ್ಪು ನೀಡಲಿಲ್ಲ. ಆ ಬಳಿಕ ಭಾರತ ತಂಡ ವಿಮರ್ಶೆ ತೆಗೆದುಕೊಂಡಿತು. ರಿವ್ಯೂವ್ನಲ್ಲಿ ಪೂರನ್ ಬ್ಯಾಟ್‌ಗೆ ಚೆಂಡು ತಗುಲಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಪೂರನ್ ಔಟಾಗಿ ಪೆವಲಿಯನ್ಗೆ ತೆರಳಬೇಕಾಯಿತು. ಮೊದಲ ಎಸೆತದಲ್ಲಿ ಸಿಕ್ಸರ್ ತಿಂದಿದ್ದ ತಿಲಕ್, ಎರಡನೇ ಎಸೆತದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ