IND vs WI: ಕಿಶನ್- ಜೈಸ್ವಾಲ್‌ಗೆ ಟೆಸ್ಟ್ ಕ್ಯಾಪ್ ನೀಡಿದ್ದು ಯಾರು ಗೊತ್ತಾ? ವಿಡಿಯೋ ನೋಡಿ
IND vs WI: ಡೊಮಿನಿಕಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ನಿರೀಕ್ಷೆಯಂತೆ ಎರಡು ಯುವ ಪ್ರತಿಭೆಗಳು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬರೋಬ್ಬರಿ ಒಂದು ತಿಂಗಳ ವಿಶ್ರಾಂತಿಯ ಬಳಿಕ ಭಾರತ ಕ್ರಿಕೆಟ್ ತಂಡ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ (WTC Final) ಸೋಲಿನ ನಂತರ, ಟೀಂ ಇಂಡಿಯಾ, ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ತನ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೂರನೇ ಆವೃತ್ತಿಯ ಅಭಿಯಾನವನ್ನು ಆರಂಭಿಸಿದೆ. ಸತತ ಎರಡನೇ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಸೋತ ಬಳಿಕ ತಂಡದಲ್ಲಿ ಹಲವು ಬದಲಾವಣೆ ತರಲು ಮುಂದಾಗಿದ್ದ ಬಿಸಿಸಿಐ (BCCI) ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೊಸ ಮುಖಗಳಿಗೆ ಆಧ್ಯತೆ ನೀಡಿತ್ತು. ಇದೀಗ ಡೊಮಿನಿಕಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ನಿರೀಕ್ಷೆಯಂತೆ ಎರಡು ಯುವ ಪ್ರತಿಭೆಗಳು ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸರಣಿಯಲ್ಲಿ ಯಾವ ಯುವ ಆಟಗಾರರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತದೆ ಎಂಬುದರ ಬಗ್ಗೆ ಈ ಹಿಂದೆ ಸ್ಪಷ್ಟತೆ ಸಿಕ್ಕಿತ್ತು. ಇದೀಗ ನಿರೀಕ್ಷೆಯಂತೆ ನಾಯಕ ರೋಹಿತ್ ಶರ್ಮಾ ತನ್ನ ಆರಂಭಿಕ ಜೊತೆಗಾರನನ್ನು ಬದಲಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಅವಕಾಶ ಮಾಡಿಕೊಡಲಾಗಿದೆ. ಯಶಸ್ವಿ ಹೊರತಾಗಿ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವಕಾಶ ಸಿಕ್ಕ 5 ಟೆಸ್ಟ್ ಪಂದ್ಯಗಳಲ್ಲಿ ಪ್ರಭಾವ ಬೀರಲು ಸಾಧ್ಯವಾಗದ ಕೆಎಸ್ ಭರತ್ ಬದಲಿಗೆ ಕಿಶನ್ ಅವರನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
IND vs WI: ಮೊದಲ ದಿನದಾಟ ಅಂತ್ಯ; ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 150 ರನ್ಗಳಿಗೆ ಆಲೌಟ್..!
ಟೆಸ್ಟ್ ಕ್ಯಾಪ್ ನೀಡಿದ್ದು ಯಾರು?
ಇನ್ನು ಈ ಇಬ್ಬರ ಆಯ್ಕೆಯನ್ನು ಟ್ವಿಟರ್ನಲ್ಲಿ ಖಚಿತ ಪಡಿಸಿದ ಬಿಸಿಸಿಐ, ಇಬ್ಬರು ಆಟಗಾರರು ತಮ್ಮ ಚೊಚ್ಚಲ ಟೆಸ್ಟ್ ಕ್ಯಾಪ್ ಸ್ವೀಕರಿಸುವ ಫೋಟೋ ಹಾಗೂ ವಿಡಿಯೋವನ್ನು ಟ್ವೀಟ್ ಮಾಡಿತ್ತು. ನಾಯಕ ರೋಹಿತ್ ಶರ್ಮಾ ಜೈಸ್ವಾಲ್‌ಗೆ ಟೆಸ್ಟ್ ಕ್ಯಾಪ್ ನೀಡಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಕಿಶನ್‌ಗೆ ಟೆಸ್ಟ್ ಕ್ಯಾಪ್ ನೀಡಿದರು.
Watch ??- Proud moment for the two youngsters as they receive their Test caps from Captain Rohit Sharma and Virat Kohli.#WIvIND pic.twitter.com/D9QXRQvX35
— BCCI (@BCCI) July 12, 2023
Congratulations to Yashasvi Jaiswal and Ishan Kishan who are all set to make their Test debut for #TeamIndia.
Go well, lads!#WIvIND pic.twitter.com/h2lIvgU6Zp
— BCCI (@BCCI) July 12, 2023
ಪೂಜಾರ ಬದಲಿಗೆ ಯಶಸ್ವಿ
ಟೀಂ ಇಂಡಿಯಾದಲ್ಲಿ ಚೊಚ್ಚಲ ಅವಕಾಶ ಪಡೆದಿರುವ ಜೈಸ್ವಾಲ್, ಚೇತೇಶ್ವರ ಪೂಜಾರ ಅವರ ಬದಲಿ ಆಯ್ಕೆಯಾಗಿದ್ದರೂ, ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಈ ಹಿಂದೆ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅಲ್ಲದೆ ತನ್ನನ್ನು ಆರಂಭಿಕನಾಗಿ ಕಣಕ್ಕಿಳಿಸಿರುವ ಆಡಳಿತ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಜೈಸ್ವಾಲ್, ಮೊದಲ ಇನ್ನಿಂಗ್ಸ್ನಲ್ಲಿ ದಿನದಾಟದಂತ್ಯಕ್ಕೆ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಹಾಗೆಯೇ ನಾಯಕ ರೋಹಿತ್ ಜೊತೆಗೂಡಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ.
ಭರತ್ ಬದಲಿಗೆ ಕಿಶನ್
ಜೈಸ್ವಾಲ್ ಜೊತೆಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕಿಶನ್, ಈ ಪಂದ್ಯದಲ್ಲಿ ವಿಕೆಟ್‌ಕೀಪರ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್ನನ್ನು ಹುಡುಕುತ್ತಿರುವ ಬಿಸಿಸಿಐಗೆ ಕಿಶನ್ ಉತ್ತಮ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಅದ್ಭುತವಾಗಿ ವಿಕೆಟ್ ಕೀಪಿಂಗ್ ಮಾಡಿರುವ ಕಿಶನ್, ಬ್ಯಾಟಿಂಗ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್ ಮತ್ತು ಮೊಹಮ್ಮದ್ ಸಿರಾಜ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ