ಜಿಂಬಾಬ್ವೆ ವಿರುದ್ಧ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ತಂಡವನ್ನು 23 ರನ್ಗಳಿಂದ ಮಣಿಸಿದೆ. ಇದೇ ಮೈದಾನದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ 100 ರನ್ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ತನ್ನ ಚಾಂಪಿಯನ್ ಆಟವನ್ನು ಮತ್ತೊಮ್ಮೆ ಪ್ರದರ್ಶಿಸಿ ಸತತ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಟೀಂ ಇಂಡಿಯಾದ ಗೆಲುವಿನ ಹೀರೋಗಳೆಂದರೆ ನಾಯಕ ಶುಭ್‌ಮನ್ ಗಿಲ್ ಮತ್ತು ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. ನಾಯಕನ ಇನ್ನಿಂಗ್ಸ್ ಆಡಿದ ಗಿಲ್ 49 ಎಸೆತಗಳಲ್ಲಿ 66 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ, ರುತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 49 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು.
ಜಿಂಬಾಬ್ವೆ ತಂಡ ಈ ಪಂದ್ಯದಲ್ಲಿ ಸೋಲು ಕಂಡರೂ ಕೊನೆಯವರೆಗೂ ಗೆಲುವಿಗಾಗಿ ಸೆಣಸಾಡಿತು. ಒಂದು ಸಮಯದಲ್ಲಿ ಜಿಂಬಾಬ್ವೆ ತಂಡದ ಅರ್ಧದಷ್ಟು ಆಟಗಾರರು ಕೇವಲ 7 ಓವರ್‌ಗಳು ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡಿದ್ದರು. ಆ ಸಮಯದಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 39 ರನ್‌ಗಳಿದ್ದವು. ಆದರೆ ಇದಾದ ಬಳಿಕ ಡಿಯೋನ್ ಮೇಯರ್ಸ್ ಹಾಗೂ ವಿಕೆಟ್ ಕೀಪರ್ ಕ್ಲೈವ್ ಮದಾಂಡೆ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಕ್ಕೆ ಉತ್ತಮ ಹೋರಾಟ ನೀಡಿದರು. ಮೇಯರ್ಸ್ 49 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರೆ, ಮದಂಡೆ 26 ಎಸೆತಗಳಲ್ಲಿ 37 ರನ್‌ಗಳ ಇನಿಂಗ್ಸ್ ಆಡಿದರು. ಆದರೆ, ಜಿಂಬಾಬ್ವೆ ಗೆಲುವಿಗೆ ಈ ಇನ್ನಿಂಗ್ಸ್ ಸಾಕಾಗಲಿಲ್ಲ.
🔙 to 🔙 wins in Harare 🙌
A 23-run victory in the 3rd T20I as #TeamIndia now lead the series 2⃣-1⃣ 👏👏
Scorecard ▶️ https://t.co/FiBMpdYQbc#ZIMvIND pic.twitter.com/ZXUBq414bI
— BCCI (@BCCI) July 10, 2024
ಆಡುವ ಹನ್ನೊಂದರ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡುವುದರ ಜೊತೆಗೆ, ಟೀಂ ಇಂಡಿಯಾ ಮೂರನೇ ಟಿ20 ಪಂದ್ಯಕ್ಕೆ ತನ್ನ ಆರಂಭಿಕ ಪಾಲುದಾರಿಕೆಯನ್ನು ಸಹ ಬದಲಾಯಿಸಿತು. ಯಶಸ್ವಿ ಜೈಸ್ವಾಲ್, ನಾಯಕ ಗಿಲ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಜೈಸ್ವಾಲ್ ಮತ್ತು ಗಿಲ್ 49 ಎಸೆತಗಳಲ್ಲಿ 67 ರನ್‌ಗಳ ಕಾಣಿಕೆ ನೀಡಿದರು. ಜೈಸ್ವಾಲ್ 27 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಆದರೆ, ಕಳೆದ ಪಂದ್ಯದ ಶತಕವೀರ ಅಭಿಷೇಕ್ ಶರ್ಮಾ 9 ಎಸೆತಗಳಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ ರುತುರಾಜ್ ಗಾಯಕ್ವಾಡ್ ನಾಯಕ ಗಿಲ್ ಜೊತೆ ಅರ್ಧಶತಕದ ಜೊತೆಯಾಟ ನಡೆಸಿದರು. ಗಿಲ್ 49 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರೆ, ಗಾಯಕ್ವಾಡ್ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Wed, 10 July 24