ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ ನಿರತವಾಗಿದೆ. ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ಮುಗಿದಿದ್ದು, 3-1 ಅಂತರದಲ್ಲಿ ಟೀಂ ಇಂಡಿಯಾ ಸರಣಿಯನ್ನು ಕೈವಶಪಡಿಸಿಕೊಂಡಿದೆ. ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸರಣಿಯ ಅಂತಿಮ ಹಾಗೂ ಐದನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್ ರಾಝಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಯಶಸ್ವಿ ಜೈಸ್ವಾಲ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಬರೋಬ್ಬರಿ 12 ರನ್ ಕಲೆಹಾಕಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
ವಾಸ್ತವವಾಗಿ ಜಿಂಬಾಬ್ವೆ ಪರ ಇನ್ನಿಂಗ್ಸ್ನ ಮೊದಲ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ನಾಯಕ ಸಿಕಂದರ್ ರಾಝಾ ಹೊತ್ತುಕೊಂಡರು. ಆ ಓವರ್‌ನ ಮೊದಲ ಎಸೆತ ನೋ ಬಾಲ್ ಆಗಿತ್ತು. ಸ್ಟ್ರೈಕ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಆ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಇದಾದ ನಂತರ ಜೈಸ್ವಾಲ್ ತಮ್ಮ ಮುಂದಿನ ಎಸೆತದಲ್ಲೂ ಸಿಕ್ಸರ್ ಬಾರಿಸಿದರು. ಇದರೊದಿಗೆ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಬರೋಬ್ಬರಿ 12 ರನ್ ಕಲೆಹಾಕಿದ ಯಶಸ್ವಿ ಜೈಸ್ವಾಲ್, ಅಂತಾರಾಷ್ಟ್ರೀಯ ಕ್ರಿಕೆಟ್ನ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಇಷ್ಟು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದಾಗ್ಯೂ ಜೈಸ್ವಾಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಹೆಚ್ಚು ಹೊತ್ತು ಉಳಿಯಲಿಲ್ಲ. ಅವರು ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.
.@ybj_19 started the final T20I of the Zimbabwe tour with a flourish 💥💥#SonySportsNetwork #ZIMvIND #TeamIndia | @BCCI pic.twitter.com/7dF3SR5Yg1
— Sony Sports Network (@SonySportsNetwk) July 14, 2024
ಜಿಂಬಾಬ್ವೆ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಬ್ಟ್ಬರ ಜೋರಾಗಿತ್ತು. ಜೈಸ್ವಾಲ್ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಏಕಪಕ್ಷೀಯವಾಗಿ ಗೆಲ್ಲುವಂತೆ ಮಾಡಿದರು. ಜೈಸ್ವಾಲ್ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. 175 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ 53 ಎಸೆತಗಳಲ್ಲಿ 93 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ ಕೇವಲ 7 ರನ್‌ಗಳಿಂದ ತಮ್ಮ ಎರಡನೇ ಟಿ20 ಶತಕವನ್ನು ಕಳೆದುಕೊಂಡರು.
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಮುಖೇಶ್ ಕುಮಾರ್.
ಜಿಂಬಾಬ್ವೆ ತಂಡ: ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಫರಾಜ್ ಅಕ್ರಂ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಬ್ರಾಂಡನ್ ಮಾವುತಾ, ರಿಚರ್ಡ್ ನ್ಗರ್ವಾ, ಬ್ಲೆಸ್ಸಿಂಗ್ ಮುಜರಬಾನಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Sun, 14 July 24