ಟೀಮ್ ಇಂಡಿಯಾ ಆಟಗಾರರು ಶೂನ್ಯಕ್ಕೆ ಔಟ್: 113 ರನ್‌ಗಳಿಗೆ ಆಲೌಟ್!
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದ ಸ್ಟಾರ್ ಆಟಗಾರರಾದ ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಅವರು ನ್ಯೂಝಿಲೆಂಡ್ 'ಎ' ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರೇ ಶೂನ್ಯಕ್ಕೆ ಔಟಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮುಂಬರುವ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಸಿದ್ಧತೆಗಾಗಿ ನ್ಯೂಝಿಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ‘ಎ’ ತಂಡ, ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನವೇ ಬ್ಯಾಟಿಂಗ್ ಮಹಾ ಕುಸಿತ ಕಂಡಿದೆ. ಲಿಂಕನ್ನ ಬರ್ಟ್ ಸಟ್‌ಕ್ಲಿಫ್ ಓವಲ್ ಮೈದಾನದ ಹಸಿರು ಪಿಚ್‌ನಲ್ಲಿ ಕಿವೀಸ್ ವೇಗಿಗಳ ಸ್ವಿಂಗ್ ಮತ್ತು ಸೀಮ್ ದಾಳಿಗೆ ತತ್ತರಿಸಿದ ಭಾರತ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಭಾರತದ ಸ್ಟಾರ್ ಆಟಗಾರರ ದಂಡು ನ್ಯೂಝಿಲೆಂಡ್‌ನ ಹಸಿರು ಪಿಚ್ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಪರಿಣಾಮ ಕೇವಲ 39.3 ಓವರ್‌ಗಳಲ್ಲಿ ಭಾರತ ತಂಡ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
5 ಆಟಗಾರರು ಶೂನ್ಯಕ್ಕೆ ಔಟ್!
ಭಾರತದ ಬ್ಯಾಟಿಂಗ್ ವೈಫಲ್ಯ ಎಷ್ಟು ಭೀಕರವಾಗಿತ್ತೆಂದರೆ, ತಂಡದ ಒಟ್ಟು ಐದು ಜನ ಬ್ಯಾಟರ್‌ಗಳು ಖಾತೆ ತೆರೆಯುವ ಮೊದಲೇ (ಡಕ್ ಔಟ್) ಪೆವಿಲಿಯನ್ ಸೇರಿದರು. ಹಿರಿಯ ಅನುಭವಿ ಆಟಗಾರ ಮತ್ತು ಭಾರತ ಟೆಸ್ಟ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಕೇವಲ 8 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗುವ ಮೂಲಕ ಈ ಪತನಕ್ಕೆ ನಾಂದಿ ಹಾಡಿದರು.
ಇವರ ಬೆನ್ನಲ್ಲೇ ಸಾಯಿ ಸುದರ್ಶನ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಧ್ರುವ್ ಜುರೆಲ್ 1 ರನ್ಗಳಿಸಿ ಔಟಾದರೆ, ಮತ್ತೋರ್ವ ಟೀಮ್ ಇಂಡಿಯಾ ಆಟಗಾರ ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದರು. ಇದಾದ ಬಳಿಕ ಮುಖೇಶ್ ಚೌಧರಿ ಹಾಗೂ ಆಕಾದ್ ದೀಪ್ ಡಕ್ ಔಟ್ ಆಗುವ ಮೂಲಕ ಪೆವಿಲಿಯನ್ಗೆ ಹಿಂತಿರುಗಿದರು.
- ಕೆಎಲ್ ರಾಹುಲ್-0
- ಸಾಯಿ ಸುದರ್ಶನ್-0
- ವಾಷಿಂಗ್ಟನ್ ಸುಂದರ್-0
- ಆಕಾಶ್ ದೀಪ್-0
- ಮುಖೇಶ್ ಚೌಧರಿ-0
ಇದಾಗ್ಯೂ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ 17 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ 32 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನು ಯಶ್ ರಾಥೋಡ್ ಅಜೇಯ 44 ರನ್ ಬಾರಿಸಿ ತಂಡದ ಮೊತ್ತ 100ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ಸೈಮನ್ ಕೀನ್ ಮಾರಕ ದಾಳಿ:
ನ್ಯೂಝಿಲೆಂಡ್ ‘ಎ’ ತಂಡದ ಯುವ ವೇಗದ ಬೌಲರ್ ಸೈಮನ್ ಕೀನ್ ಭಾರತೀಯ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅತ್ಯುತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದ ಅವರು 5 ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಅತಿ ದೊಡ್ಡ ಆಘಾತ ನೀಡಿದರು. ಅವರಿಗೆ ತಕ್ಕ ಸಾಥ್ ನೀಡಿದ ಉಳಿದ ಕಿವೀಸ್ ವೇಗಿಗಳು ಭಾರತಕ್ಕೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಪರಿಣಾಮ ಟೀಮ್ ಇಂಡಿಯಾ 113 ರನ್‌ಗಳಿಗೆ ಆಲೌಟ್ ಆಯಿತು.
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್ , ಸಾಯಿ ಸುದರ್ಶನ್ , ಧ್ರುವ್ ಜುರೆಲ್ (ನಾಯಕ) , ಯಶ್ ರಾಥೋಡ್ , ವಾಷಿಂಗ್ಟನ್ ಸುಂದರ್ , ಅನ್ಶುಲ್ ಕಾಂಬೋಜ್ , ಆಖಿಬ್ ನಬಿ , ಆಕಾಶ್ ದೀಪ್ , ಮುಖೇಶ್ ಚೌಧರಿ.
ಇದನ್ನೂ ಓದಿ: ನಿರ್ಧಾರ ಬದಲಿಸಿದ ಟಿಮ್ ಡೇವಿಡ್: ಹೊಸ ತಂಡದ ಪರ ಕಣಕ್ಕೆ!
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್), ಸೈಮನ್ ಕೀನ್ , ಕ್ರಿಶ್ಚಿಯನ್ ಕ್ಲಾರ್ಕ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್ , ಜ್ಯಾಕ್ ಗಿಬ್ಸನ್.




