ಸೌತ್ ಆಫ್ರಿಕಾ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಟೀಮ್ ಇಂಡಿಯಾ

India A vs South Africa A: ಭಾರತ ಎ ಮತ್ತು ಸೌತ್ ಆಫ್ರಿಕಾ ಎ ತಂಡಗಳ ನಡುವೆ 4 ದಿನಗಳ 2 ಟೆಸ್ಟ್​ ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯ ಮೊದಲ ಪಂದ್ಯ ಮ್ಯಾಚ್ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಎರಡನೇ ಪಂದ್ಯವು ನವೆಂಬರ್ 6 ರಂದು ಆರಂಭವಾಗಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ.

ಸೌತ್ ಆಫ್ರಿಕಾ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಟೀಮ್ ಇಂಡಿಯಾ
Ind Vs Sa

Updated on: Nov 01, 2025 | 10:58 AM

ಬೆಂಗಳೂರಿನ ಸೆಂಟ್ರಲ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಎ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡವು ಅಲ್ಪ ಮೊತ್ತಗಳಿಸಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಆರಂಭಿಕ ದಾಂಡಿಗ ಜೋರ್ಡನ್ ಹರ್ಮನ್ 71 ರನ್ ಬಾರಿಸಿದ್ದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಝುಬೇರ್ ಹಮ್ಝ 66 ರನ್​ ಸಿಡಿಸಿದರು. ಆ ಬಳಿಕ ಬಂದ ನಾಯಕ ಮಾರ್ಕಸ್ ಅಕರ್ಮನ್ 18 ರನ್​ಗಳಿಸಿ ಔಟಾದರೆ, ರುಬಿನ್ ಹರ್ಮನ್ 54 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು ಮೊದಲ ಇನಿಂಗ್ಸ್​ನಲ್ಲಿ 309 ರನ್​ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಸಾಯಿ ಸುದರ್ಶನ್ ಹಾಗೂ ಆಯುಷ್ ಮ್ಹಾತ್ರೆ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 90 ರನ್​ ಪೇರಿಸಿದ ಬಳಿಕ 76 ಎಸೆತಗಳಲ್ಲಿ 65 ರನ್ ಬಾರಿಸಿದ ಆಯುಷ್ ಮ್ಹಾತ್ರೆ ಔಟಾದರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ (6) ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಬೆನ್ನಲ್ಲೇ  32 ರನ್​ಗಳಿಸಿದ ಸಾಯಿ ಸುದರ್ಶನ್ ಕೂಡ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಇನ್ನು ರಜತ್ ಪಾಟಿದಾರ್ 19 ರನ್​ಗಳಿಸಿದರೆ, ನಾಯಕ ರಿಷಭ್ ಪಂತ್ ಕೇವಲ 17 ರನ್​ಗಳಿಸಿ ನಿರಾಸೆ ಮೂಡಿಸಿದರು. ಇದರ ನಡುವೆ ಆಯುಷ್ ಬದೋನಿ 38 ರನ್​ಗಳ ಕೊಡುಗೆ ನೀಡಿದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ವಿಫಲರಾದರು. ಪರಿಣಾಮ ಭಾರತ ಎ ತಂಡವು ಮೊದಲ ಇನಿಂಗ್ಸ್​ನಲ್ಲಿ 234 ರನ್​ಗಳಿಸಿ ಆಲೌಟ್ ಆಯಿತು.

ಸೌತ್ ಆಫ್ರಿಕಾ ಪರ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿದ ಪ್ರೆನೆಲನ್ ಸುಬ್ರಯೆನ್ 22 ಓವರ್​ಗಳಲ್ಲಿ ಕೇವಲ 61 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

ಭಾರತ ಎ ತಂಡಕ್ಕೆ 75 ರನ್​ಗಳ ಹಿನ್ನಡೆ:

ಮೊದಲ ಇನಿಂಗ್ಸ್​ನಲ್ಲಿನ 75 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ಎ ತಂಡವು 20 ಓವರ್​ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ನಷ್ಟಕ್ಕೆ 70 ರನ್ ಕಲೆಹಾಕಿದೆ.

ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಆಯುಷ್ ಮ್ಹಾತ್ರೆ , ದೇವದತ್ ಪಡಿಕ್ಕಲ್ , ರಜತ್ ಪಾಟಿದಾರ್ ,ರಿಷಭ್ ಪಂತ್ (ನಾಯಕ) , ಆಯುಷ್ ಬದೋನಿ , ತನುಷ್ ಕೋಟ್ಯಾನ್ , ಅನ್ಶುಲ್ ಕಂಬೋಜ್ , ಮಾನವ್ ಸುತಾರ್ , ಗುರ್ನೂರ್ ಬ್ರಾರ್ ,ಖಲೀಲ್ ಅಹ್ಮದ್.

ಇದನ್ನೂ ಓದಿ: ಬಾಬರ್ ಅಬ್ಬರಕ್ಕೆ ರೋಹಿತ್ ಶರ್ಮಾ ವಿಶ್ವ ದಾಖಲೆ ಧೂಳೀಪಟ

ಸೌತ್ ಆಫ್ರಿಕಾ ಎ ಪ್ಲೇಯಿಂಗ್ 11: ಜೋರ್ಡಾನ್ ಹರ್ಮನ್ , ಲೆಸೆಗೊ ಸೆನೋಕ್ವಾನೆ , ಮಾರ್ಕ್ವೆಸ್ ಅಕರ್ಮನ್ (ನಾಯಕ) , ಝುಬೈರ್ ಹಮ್ಝ , ರೂಬಿನ್ ಹರ್ಮನ್ , ರಿವಾಲ್ಡೊ ಮೂನ್ಸಾಮಿ (ವಿಕೆಟ್ ಕೀಪರ್) ,ಟಿಯಾನ್ ವ್ಯಾನ್ ವುರೆನ್ , ಪ್ರೆನೆಲನ್ ಸುಬ್ರಯೆನ್ , ತ್ಸೆಪೋ ಮೊರೆಕಿ , ಲುಥೋ ಸಿಪಾಮ್ಲಾ , ಒಕುಹ್ಲೆ ಸೆಲೆ.