ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜನವರಿ 25 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನು (Team India) ಸಹ ಆಯ್ಕೆ ಮಾಡಲಾಗಿದೆ. ಪ್ರಕಟವಾದ ತಂಡವನ್ನು ನೋಡುವುದಾದರೆ ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೆ ಇದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಜನವರಿ 25 ರಿಂದ ಹೈದರಾಬಾದ್ ಮೈದಾನದಲ್ಲಿ ಆರಂಭವಾಗಲಿದೆ. ಈ ನಡುವೆ ಎರಡು ತಂಡಗಳಲ್ಲಿ ಗೆಲ್ಲುವ ನೆಚ್ಚಿನ ತಂಡ ಯಾವುದು ಎಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದ್ದು, ಎರಡೂ ತಂಡಗಳ ಮಾಜಿ ಆಟಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಮ್ಮದೆಯಾದ ವಿಶ್ಲೇಷಣೆಯೊಂದಿಗೆ ಮಂಡಿಸುತ್ತಿದ್ದಾರೆ. ಇದೀಗ ಅವರ ಸಾಲಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ಅಥರ್ಟನ್ (Michael Atherton) ಸೇರಿಕೊಂಡಿದ್ದು, ಈ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆಲ್ಲಲಿದೆ ಎಂದು ಹೇಳುವ ಮೂಲಕ ಅಥರ್ಟನ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಬಗ್ಗೆ ಸ್ಕೈಸ್ಪೋರ್ಟ್ಸ್ ಜೊತೆ ಮಾತನಾಡಿದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ಅಥರ್ಟನ್, ಈ ಸರಣಿಯನ್ನು ಭಾರತ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇಂಗ್ಲೆಂಡ್ ತಂಡಕ್ಕೆ ಹೊಲಿಸಿದರೆ ಭಾರತ ತಂಡದಲ್ಲಿರುವ ಸ್ಪಿನ್ನರ್‌ಗಳು ಸಾಕಷ್ಟು ಅನುಭವಿಗಳಾಗಿದ್ದಾರೆ. ಇದು ಸರಣಿ ಗೆಲುವಿನಲ್ಲಿ ನಿರ್ಣಾಯಕ ಅಂಶವಾಗಿದೆ. ಭಾರತದ ಪಿಚ್ಗಳಲ್ಲಿ ಸ್ಪಿನ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾವು ಇತಿಹಾಸವನ್ನು ನೋಡಿದರೆ ಅದರಿಂದಲೇ ನಾವು ಅರಿತುಕೊಳ್ಳಬಹುದು.
ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೆಚ್ಚು ವಿಕೆಟ್ ಪಡೆದ ಭಾರತದ ಟಾಪ್-10 ಬೌಲರ್‌ಗಳಿವರು
ಟೀಂ ಇಂಡಿಯಾ ಸ್ಪಿನ್ ಜೊತೆಗೆ ಅತ್ಯಂತ ಬಲಿಷ್ಠ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ಭಾರತದ ನಾಲ್ವರು ಸ್ಪಿನ್ನರ್‌ಗಳು ಇಂಗ್ಲೆಂಡ್‌ನ ಸ್ಪಿನ್ನರ್‌ಗಳಿಗಿಂತ ತುಂಬಾ ಭಿನ್ನರು. ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್‌ರಂತಹ ಇಬ್ಬರು ಎಡಗೈ ‘ಫಿಂಗರ್’ ಸ್ಪಿನ್ನರ್‌ಗಳಿದ್ದರೆ, ಕುಲ್ದೀಪ್ ಯಾದವ್‌ರಂತಹ ಮಣಿಕಟ್ಟಿನ ಸ್ಪಿನ್ನರ್ ಸಹ ತಂಡದಲ್ಲಿದ್ದಾರೆ. ಇವರೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ಕೂಡ ತಂಡದಲ್ಲಿದ್ದಾರೆ.
ಆದರೆ ಇಂಗ್ಲೆಂಡ್ ತಂಡದಲ್ಲಿ ಜ್ಯಾಕ್ ಲೀಚ್‌ರನ್ನು ಬಿಟ್ಟರೆ ಉಳಿದ ಸ್ಪಿನ್ನರ್‌ಗಳು ಅನಾನುಭವಿಗಳಾಗಿದ್ದಾರೆ. ಕಡಿಮೆ ಅನುಭವಿ ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್ ಮತ್ತು ರೆಹಾನ್ ಅಹ್ಮದ್ ಇಂಗ್ಲೆಂಡ್ ತಂಡದಲ್ಲಿದ್ದಾರೆ. ಈ ಅನಾನುಭವಿಗಳಿಂದ ತಂಡದ ಆಯ್ಕೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಭಾರತದ ಪಿಚ್ಗಳಲ್ಲಿ ಮೊದಲ ದಿನದಿಂದಲೇ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಇದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಪರೀಕ್ಷೆಯಾಗಿದೆ ಎಂದು ಮೈಕೆಲ್ ಅಥರ್ಟನ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡ 2012ರಲ್ಲಿ ಕೊನೆಯ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಆಗ ಇಂಗ್ಲೆಂಡ್ ತಂಡದಲ್ಲಿ ಗ್ರೇಮ್ ಸ್ವಾನ್ ಮತ್ತು ಮಾಂಟಿ ಪನೇಸರ್ ಅವರಂತಹ ಅತ್ಯುತ್ತಮ ಸ್ಪಿನ್ನರ್‌ಗಳಿದ್ದರು. ಈ ಬಾರಿ ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವ ಬದಲು ಅಬುಧಾಬಿಯಲ್ಲಿ ತಯಾರಿ ನಡೆಸಲು ಇಂಗ್ಲೆಂಡ್ ತಂಡ ನಿರ್ಧರಿಸಿದೆ. ಇನ್ನು ಇಂಗ್ಲೆಂಡ್ ಮತ್ತು ಭಾರತ ತಂಡದ ನಡುವೆ ಇದುವರೆಗೆ 131 ಟೆಸ್ಟ್ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 31 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 50 ಪಂದ್ಯಗಳನ್ನು ಗೆದ್ದಿದೆ. ಉಳಿದ 50 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 21 January 24