IND vs PAK: ಪಾಕಿಸ್ತಾನ ವಿರುದ್ಧ 2 ರನ್​ಗಳ ರೋಚಕ ಜಯ ಸಾಧಿಸಿದ ಭಾರತ

Hong Kong Sixes: ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹಣಾಹಣಿಯಲ್ಲಿ ಭಾರತ ಡಕ್‌ವರ್ತ್-ಲೂಯಿಸ್ ವಿಧಾನದ ಮೂಲಕ 2 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ರಾಬಿನ್ ಉತ್ತಪ್ಪ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸ್ಟುವರ್ಟ್ ಬಿನ್ನಿ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಭಾರತ ಕೊನೆಗೂ ಮೇಲುಗೈ ಸಾಧಿಸಿತು.

IND vs PAK: ಪಾಕಿಸ್ತಾನ ವಿರುದ್ಧ 2 ರನ್​ಗಳ ರೋಚಕ ಜಯ ಸಾಧಿಸಿದ ಭಾರತ
Ind Vs Pak

Updated on: Nov 07, 2025 | 2:47 PM

ಹಾಂಗ್ ಕಾಂಗ್ ಸಿಕ್ಸಸ್ (Hong Kong Sixes) ಪಂದ್ಯಾವಳಿ ಇಂದಿನಿಂದ ಆರಂಭವಾಗಿದೆ. ಈ ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದವು. ಅತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಗೆಲುವಿನ ಶುಭಾರಂಭ ಪಡೆದುಕೊಂಡಿದೆ. ವಾಸ್ತವವಾಗಿ ಪಾಕಿಸ್ತಾನ ಪಂದ್ಯವನ್ನು ಗೆಲ್ಲುವ ಅವಕಾಶ ಹೊಂದಿತ್ತು. ಆದರೆ ಮಾಂಗ್ ಕೋಕ್‌ನಲ್ಲಿ ಮಳೆ ಬಂದ ಕಾರಣ ಭಾರತವು ಡಕ್‌ವರ್ತ್-ಲೂಯಿಸ್ ವಿಧಾನದ ಪ್ರಕಾರ 2 ರನ್‌ಗಳಿಂದ ಜಯ ಸಾಧಿಸಿತು.

ಭಾರತ ನೀಡಿದ 87 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ತಂಡವು ಕೇವಲ 3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು, ಆದರೆ ಈ ಹಂತದಲ್ಲಿ ಭಾರೀ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಬೇಕಾಯಿತು. ಮಳೆ ನಿಲ್ಲದ ಕಾರಣ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡಕ್‌ವರ್ತ್-ಲೂಯಿಸ್ ವಿಧಾನವನ್ನು ಬಳಸಿಕೊಂಡು ಫಲಿತಾಂಶವನ್ನು ನಿರ್ಧರಿಸಲಾಯಿತು. ಈ ವಿಧಾನದ ಪ್ರಕಾರ, ಪಾಕಿಸ್ತಾನವು ಭಾರತಕ್ಕಿಂತ 2 ರನ್‌ಗಳ ಹಿಂದಿದ್ದ ಕಾರಣ ಪಂದ್ಯವನ್ನು ಕಳೆದುಕೊಂಡಿತು.

ಮಿಂಚಿದ ರಾಬಿನ್ ಉತ್ತಪ್ಪ

ಟಾಸ್ ಸೋತ ಭಾರತದ ನಾಯಕ ದಿನೇಶ್ ಕಾರ್ತಿಕ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಆರು ಓವರ್‌ಗಳಲ್ಲಿ ಕೇವಲ 86 ರನ್‌ ಗಳಿಸಿತು. ಭಾರತದ ಪರ ರಾಬಿನ್ ಉತ್ತಪ್ಪ 11 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 28 ​​ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭರತ್ ಚಿಪ್ಲಿ 13 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 24 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಕೂಡ ಆರು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ ಅಜೇಯ 17 ರನ್ ಬಾರಿಸಿದರು.

ಬೌಲಿಂಗ್​ನಲ್ಲಿ ಮಿಂಚಿದ ಸ್ಟುವರ್ಟ್ ಬಿನ್ನಿ

ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಎರಡನೇ ಓವರ್​ನಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಈ ಓವರ್‌ನಲ್ಲಿ ಅವರು ಮಾಜ್ ಸದಾಕತ್ ಅವರ ವಿಕೆಟ್ ಅನ್ನು ಸಹ ಪಡೆದರು. ಈ ಓವರ್‌ ನಡೆಯುವಾಗಲೇ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಈ ಹಂತದಲ್ಲಿ ಪಾಕಿಸ್ತಾನ, ಭಾರತಕ್ಕಿಂತ 2 ರನ್‌ಗಳ ಹಿಂದಿದ್ದ ಕಾರಣ ಭಾರತದ ಗೆಲುವು ಖಚಿತವಾಯಿತು.

ಪಾಕಿಸ್ತಾನಿ ಬೌಲರ್‌ಗಳ ಪ್ರದರ್ಶನ

ಇದಕ್ಕೂ ಮುನ್ನ ಭಾರತವನ್ನು ಬೃಹತ್ ಮೊತ್ತ ದಾಖಲಿಸಿದಂತೆ ತಡೆದಿದ್ದ ಪಾಕಿಸ್ತಾನದ ಬೌಲರ್​ಗಳಲ್ಲಿ, ಅತ್ಯಂತ ಯಶಸ್ವಿ ಬೌಲರ್ ಮೊಹಮ್ಮದ್ ಶಹಜಾದ್. ಅವರು ಒಂದು ಓವರ್‌ನಲ್ಲಿ 15 ರನ್‌ ನೀಡಿ ಪ್ರಮುಖ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಅಬ್ದುಲ್ ಸಮದ್ 16 ರನ್‌ ನೀಡಿ ಒಂದು ವಿಕೆಟ್ ಪಡೆದರೆ, ಶಾಹಿದ್ ಅಜೀಜ್ ಒಂದು ಓವರ್‌ನಲ್ಲಿ 13 ರನ್‌ ನೀಡಿದರು. ಎಡಗೈ ಸ್ಪಿನ್ನರ್ ಮಾಜ್ ಸದಾಕತ್ ಎರಡು ಓವರ್‌ಗಳಲ್ಲಿ ಕೇವಲ 19 ರನ್‌ಗಳನ್ನು ಬಿಟ್ಟುಕೊಟ್ಟರು.

ಉಭಯ ತಂಡಗಳು

ಪಾಕಿಸ್ತಾನ ತಂಡ: ಖವಾಜಾ ನಫೆ, ಅಬ್ದುಲ್ ಸಮದ್, ಮುವಾಜ್ ಸದಾಕತ್, ಶಾಹಿದ್ ಅಜೀಜ್, ಅಬ್ಬಾಸ್ ಅಫ್ರಿದಿ ಮತ್ತು ಮುಹಮ್ಮದ್ ಶಹಜಾದ್.

ಭಾರತ ತಂಡ: ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಭರತ್ ಚಿಪ್ಲಿ ಮತ್ತು ಶಹಬಾಜ್ ನದೀಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Fri, 7 November 25