T20 World Cup 2022: ಟಿ20 ವಿಶ್ವಕಪ್ನಲ್ಲಿನ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕಾಗಿ ದಿನಗಣನೆ ಶುರುವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಸೆಣಸಲಿದ್ದಾರೆ. ಅದಕ್ಕೂ ಮುನ್ನ ಉಭಯ ತಂಡಗಳ ನಾಯಕರುಗಳು ಐಸಿಸಿಯ ಫೋಟೋ ಶೂಟ್ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಪಾಕಿಸ್ತಾನ್ ಆಟಗಾರರ ಜೊತೆಗಿನ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಬಗ್ಗೆ ಕೇಳಿದಾಗ, “ನಾವು ಪಂದ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ ಅದರ ಬಗ್ಗೆ ಎಲ್ಲಾ ಸಮಯದಲ್ಲೂ ಮಾತನಾಡುವುದರಲ್ಲಿ ಮತ್ತು ನಿಮ್ಮೊಳಗೆ ಆ ಒತ್ತಡವನ್ನು ಸೃಷ್ಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
ನಾವು ಪಾಕಿಸ್ತಾನದ ಆಟಗಾರರನ್ನು ಭೇಟಿಯಾದಾಗ, ನಮ್ಮ ಕುಟುಂಬಗಳ ಬಗ್ಗೆ ಮಾತನಾಡುತ್ತೇವೆ. ಕುಟುಂಬಗಳ ಬಗ್ಗೆ ಚರ್ಚಿಸುತ್ತೇವೆ ಅಷ್ಟೇ. ನಾನು ಸಹ ಆಟಗಾರರೊಂದಿಗೆ ನಡೆಸಿದ ಸಂವಾದದ ಬಗ್ಗೆ ಮಾತನಾಡುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದರು.
ನಮ್ಮ ಪೀಳಿಗೆಯ ಆಟಗಾರರ ಸಂಭಾಷಣೆಗಳು ಮನೆ, ಜೀವನ ಮತ್ತು ಕೆಲವೊಮ್ಮೆ ಕಾರಿನ ಬಗ್ಗೆ ಚರ್ಚೆ ನಡೆಸುತ್ತೇವೆ. ಅದರಲ್ಲೂ ಯಾವ ಕಾರನ್ನು ಖರೀದಿಸಿದ್ದೀರಿ ಮತ್ತು ಯಾವ ಕಾರನ್ನು ಖರೀದಿಸಲು ಯೋಜಿಸುತ್ತಿದ್ದೀರಿ ಎಂಬುದರ ಬಗ್ಗೆ ಮಾತುಕತೆ ನಡೆಯುತ್ತದೆ. ಇಂತಹ ವಿಷಯಗಳ ಬಗ್ಗೆನೇ ನಾವು ಹೆಚ್ಚಾಗಿ ಮಾತನಾಡುತ್ತೇವೆ. ನಮ್ಮ ಹಿರಿಯ ಆಟಗಾರರು, ಅಂದರೆ ಈ ಹಿಂದೆ ಪಾಕ್ ವಿರುದ್ಧ ಆಡಿದ ಆಟಗಾರರು ಕೂಡ ಇಂತಹ ವಿಷಯಗಳನ್ನೇ ಮಾತನಾಡುತ್ತಿದ್ದರು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಹಾಗೆಯೇ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಉತ್ತರ ಕೂಡ ಭಿನ್ನವಾಗಿರಲಿಲ್ಲ. ನಾವು ಭಾರತ ತಂಡದ ಆಟಗಾರರನ್ನು ಭೇಟಿಯಾದಾಗ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ನಮ್ಮ ವೈಯುಕ್ತಿಕ ವಿಷಯಗಳನ್ನು ಚರ್ಚಿಸುತ್ತೇವೆ. ರೋಹಿತ್ ಭಾಯ್ ನನಗಿಂತ ಹಿರಿಯರು. ನಾನು ಅವರಿಂದ ಕಲಿಯಲು ಪ್ರಯತ್ನಿಸುತ್ತೇನೆ. ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ನಾನು ಅವರಿಂದ ನಾನು ಏನನ್ನು ಕಲಿಯಬಲ್ಲೆ ಎಂಬುದರ ಬಗ್ಗೆ ಮಾತನಾಡುತ್ತೇನೆ ಎಂದು ಬಾಬರ್ ಆಜಂ ತಿಳಿಸಿದರು. ಈ ಮೂಲಕ ಕ್ರೀಡೆಯನ್ನು ಕ್ರೀಡಾಸ್ಪೂರ್ತಿಯಿಂದ ನೋಡುವಂತೆ ಉಭಯ ತಂಡಗಳ ನಾಯಕರುಗಳು ಪರೋಕ್ಷ ಸಂದೇಶ ರವಾನಿಸಿದ್ದಾರೆ.