
ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಹೀನಾಯವಾಗಿ ಸೋತ ಬಳಿಕ ಭಾರತ ತಂಡದ (Team India) ಕೋಚಿಂಗ್ ಸಿಬ್ಬಂದಿಗಳ ತಲೆದಂಡವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಒಬ್ಬರನ್ನು ಬಿಟ್ಟು ಉಳಿದವರನ್ನು ತೆಗೆದುಹಾಕಬಹುದು ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ (Ryan ten Doeschate) ಟೀಂ ಇಂಡಿಯಾವನ್ನು ತೊರೆಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಸ್ವತಃ ಡೋಸ್ಚೇಟ್ ಅವರೇ ಈ ಹುದ್ದೆಯನ್ನು ತೊರೆಯಲು ಮುಂದಾಗಿದ್ದು ಬಿಸಿಸಿಐ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಂದ ಅನುಮತಿಗಾಗಿ ಕಾಯುತ್ತಿದ್ದಾರೆ. ಅನುಮತಿ ದೊರೆತ ನಂತರ, ಜುಲೈ 19 ರ ಏಕದಿನ ಪಂದ್ಯವು ಸಹಾಯಕ ಕೋಚ್ ಆಗಿ ಟೀಂ ಇಂಡಿಯಾದೊಂದಿಗೆ ಅವರ ಕೊನೆಯ ಪಂದ್ಯವಾಗುವ ಸಾಧ್ಯತೆಗಳಿವೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಡೋಸ್ಚೇಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ವರದಿ ಪ್ರಕಾರ, ಡೋಸ್ಚೇಟ್ ಟೀಂ ಇಂಡಿಯಾದೊಳಗಿನ ವಾತಾವರಣದಿಂದ ಸಂತೋಷವಾಗಿದ್ದಾರೆ ಮತ್ತು ಅವರ ಕೆಲಸದಲ್ಲಿ ತೃಪ್ತರಾಗಿದ್ದಾರೆ, ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ತಂಡವನ್ನು ತೊರೆಯಲು ಬಯಸಿರುವುದಾಗಿ ವರದಿಯಾಗಿದೆ. ಡೋಸ್ಚೇಟ್ ಅವರಿಗೆ ಮೂವರು ಚಿಕ್ಕ ಗಂಡು ಮಕ್ಕಳು ಮತ್ತು ಪತ್ನಿ ಇದ್ದಾರೆ. ಪತ್ನಿ ಕೆಲಸಕ್ಕೆ ಹೋಗುತ್ತಿದ್ದು ಅವರ ಕುಟುಂಬವು ಲಂಡನ್‌ನಲ್ಲಿ ವಾಸಿಸುತ್ತಿದೆ. ಹೀಗಾಗಿ ಡೋಸ್ಚೇಟ್ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಿದ್ದಾರೆ. ಅಲ್ಲದೆ ಅವರು ಕಡಿಮೆ ಪ್ರಯಾಣವನ್ನು ಒಳಗೊಂಡಿರುವ ಮತ್ತು ಅವರ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಅನುವು ಮಾಡಿಕೊಡುವ ಕೆಲಸವನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.
ಡೋಸ್ಚೇಟ್ ಎರಡು ವರ್ಷಗಳ ಹಿಂದೆ ಭಾರತ ತಂಡಕ್ಕೆ ಸಹಾಯಕ ಕೋಚ್ ಆಗಿ ಸೇರಿಕೊಂಡರು. ಅವರ ಎರಡು ವರ್ಷಗಳ ಒಪ್ಪಂದವು ಜುಲೈ 12 ಮತ್ತು 14 ರ ಸುಮಾರಿಗೆ ಕೊನೆಗೊಳ್ಳುತ್ತದೆ ಎಂದು ವರದಿಯಾಗಿದೆ. ಆದ್ದರಿಂದ, ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯದ ನಂತರ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ.
ರಯಾನ್ ಟೆನ್ ಡೋಸ್ಚೇಟ್ ಅದ್ಭುತ ಕೋಚಿಂಗ್ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು 2021 ರಿಂದ ಕೋಚಿಂಗ್ ಮಾಡುತ್ತಿದ್ದು, ಮೊದಲಿಗೆ ಕೆಂಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. ಒಂದು ವರ್ಷದ ನಂತರ, ಅವರು ಕೆಕೆಆರ್ ಸೇರಿ 2024 ರವರೆಗೆ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದರು. 2024 ರ ನಂತರ, ಅವರು ಟೀಂ ಇಂಡಿಯಾದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. ಈಗ, ಟೀಂ ಇಂಡಿಯಾವನ್ನು ತೊರೆದ ನಂತರ, ಡೋಸ್ಚೇಟ್ ಮತ್ತೆ ಕೌಂಟಿ ತಂಡವನ್ನು ಸೇರಬಹುದು.
Published On - 4:30 pm, Tue, 14 July 26