IND vs ENG: ಊಟದ ವಿರಾಮಕ್ಕೂ ಮುನ್ನವೇ 8 ವಿಕೆಟ್ ಪತನ; ಭಾರತದ ಸೋಲು ಬಹುತೇಕ ಖಚಿತ

India vs England Test: ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಪಂದ್ಯದ ಆರಂಭದಲ್ಲಿ ಭಾರತದ ಗೆಲುವು ಖಚಿತ ಎಂದು ತೋರಿದರೂ, ಐದನೇ ದಿನದ ಆಟದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ದುರ್ಬಲ ಪ್ರದರ್ಶನ ನೀಡಿದರು. ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರ ವಿಕೆಟ್‌ಗಳು ಭಾರತದ ಗೆಲುವಿನ ಆಸೆಗಳನ್ನು ಮುರಿದವು.

IND vs ENG: ಊಟದ ವಿರಾಮಕ್ಕೂ ಮುನ್ನವೇ 8 ವಿಕೆಟ್ ಪತನ; ಭಾರತದ ಸೋಲು ಬಹುತೇಕ ಖಚಿತ
Ind Vs Eng

Updated on: Jul 14, 2025 | 5:52 PM

ಲಾರ್ಡ್ಸ್‌ ಟೆಸ್ಟ್ (Lord’s Test) ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಳ್ಳುತ್ತದೆ ಎಂಬುದು ಅಭಿಮಾನಿಗಳ ಹಾಗೂ ಪರಿಣಿತರ ಅಭಿಪ್ರಾಯವಾಗಿತ್ತು. ಏಕೆಂದರೆ ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ಪ್ರದರ್ಶನ ಅಮೋಘವಾಗಿದಿದ್ದು. ಅದು ಮಾತ್ರವಲ್ಲದೆ ಭಾರತದ ಮುಂದೆ ಕೇವಲ 193 ರನ್​ಗಳ ಗುರಿ ಇದ್ದಿದ್ದರಿಂದ ಈ ಪಂದ್ಯದಲ್ಲಿ ಭಾರತದ ಗೆಲುವು ನಿಶ್ಚಿತ ಎಂದು ತೋರುತ್ತಿತ್ತು. ಆದರೆ ಭಾರತದ ಇನ್ನಿಂಗ್ಸ್ ಆರಂಭವಾದ ಕೂಡಲೇ ಅಸಲಿ ಫಲಿತಾಂಶ ಗೋಚರಿಸಲಾರಂಭಿಸಿತು. 4ನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 58 ರನ್ ಬಾರಿಸಿದ್ದ ಭಾರತಕ್ಕೆ ಕನ್ನಡಿಗ ಕೆಎಲ್ ರಾಹುಲ್ (KL Rahul) ಹಾಗೂ ರಿಷಭ್ ಪಂತ್ ಆಸರೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಐದನೇ ದಿನದಾಟ ಆರಂಭವಾಗಿ ಒಂದು ಸೆಷನ್ ಮುಗಿಯುವ ವೇಳೆಗೆ ಪಂದ್ಯ ಭಾರತದ ಕೈಜಾರಿ ಹೋಗಿದೆ.

ಪ್ರಮುಖ 8 ವಿಕೆಟ್ ಪತನ

ಐದನೇ ದಿನದಾಟದ ಮೊದಲ ಸೆಷನ್ ಮುಗಿಯುವ ವೇಳೆಗೆ ಅಂದರೆ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ಕೇವಲ 112 ರನ್‌ಗಳಿಗೆ ಪ್ರಮುಖ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಎಂಟನೇ ವಿಕೆಟ್ ಆಗಿ ನಿತೀಶ್ ರೆಡ್ಡಿ ಔಟಾಗಿದ್ದು, ಅಂಪೈರ್ ಕೂಡ ಊಟದ ವಿರಾಮ ಘೋಷಿಸಿದ್ದಾರೆ. ಎಂಟನೇ ವಿಕೆಟ್‌ಗೆ ಜಡೇಜಾ ಅವರೊಂದಿಗೆ ನಿತೀಶ್ 91 ಎಸೆತಗಳಲ್ಲಿ 30 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ ಇವರಿಬ್ಬರೇ ತಂಡದ ಕೊನೆಯ ಬ್ಯಾಟಿಂಗ್ ಜೋಡಿ ಆಗಿದ್ದರಿಂದ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ನಿತೀಶ್ ಔಟಾದ ಬಳಿಕ ತಂಡದ ಸೋಲು ಬಹುತೇಕ ಖಚಿತವಾದಂತ್ತಾಗಿದೆ. ಪ್ರಸ್ತುತ, ರವೀಂದ್ರ ಜಡೇಜಾ 17 ರನ್‌ಗಳೊಂದಿಗೆ ಅಜೇಯರಾಗಿದ್ದಾರೆ.

IND vs ENG: ತಂಡ ಸಂಕಷ್ಟದಲ್ಲಿದ್ದಾಗಲೂ ಕೈ ಹಿಡಿಯದ ಕರುಣ್ ವಿರುದ್ಧ ಭುಗಿಲೆದ್ದ ಆಕ್ರೋಶ

ಕೈಕೊಟ್ಟ ಭರವಸೆಯ ಆಟಗಾರರು

ವಾಸ್ತವವಾಗಿ ಐದನೇ ದಿನದಾಟದ ಆರಂಭ ಭಾರತಕ್ಕೆ ಉತ್ತಮವಾಗಿರಲಿಲ್ಲ. ಭರವಸೆಯ ಬ್ಯಾಟರ್​ಗಳಾಗಿದ್ದ ರಿಷಭ್ ಪಂತ್ (9 ರನ್) ಮತ್ತು ಕೆಎಲ್ ರಾಹುಲ್ (39 ರನ್) ಬೇಗನೇ ವಿಕೆಟ್‌ಗಳನ್ನು ಕೈಚೆಲ್ಲಿದರು. ಇದರ ನಂತರ, ವಾಷಿಂಗ್ಟನ್ ಸುಂದರ್ ಕೂಡ ಖಾತೆ ತೆರೆಯದೆ ನಿರ್ಗಮಿಸಿದರು. ಇದೀಗ ನಿತೀಶ್ ಕೂಡ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತ ಮೊಹಮ್ಮದ್ ಸಿರಾಜ್ ಮಾತ್ರ ಉಳಿದಿದ್ದು, ಇವರಿಂದ ರನ್ ನಿರೀಕ್ಷಿಸುವುದು ಅಸಾಧ್ಯದ ಮಾತು. ಇವರಿಬ್ಬರಲ್ಲಿ ಒಬ್ಬರು ಜಡೇಜಾಗೆ ಉತ್ತಮ ಸಾಥ್ ನೀಡಿದರೆ, ಆಗ ಭಾರತದ ಗೆಲುವಿನ ಬಗ್ಗೆ ಯೋಚನೆ ಮಾಡಬಹುದು. ಇಲ್ಲಿಯವರೆಗೆ ಜೋಫ್ರಾ ಆರ್ಚರ್ ಮೂರು ವಿಕೆಟ್‌ಗಳನ್ನು ಪಡೆದಿದ್ದರೆ, ಬೆನ್ ಸ್ಟೋಕ್ಸ್ ಮತ್ತು ಬ್ರೈಡನ್ ಕಾರ್ಸೆ ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಕ್ರಿಸ್ ವೋಕ್ಸ್ ಒಂದು ವಿಕೆಟ್ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Mon, 14 July 25