IND vs ENG: ಲಾರ್ಡ್ಸ್‌ ಮೈದಾನದಲ್ಲಿ ಮೊದಲ ಮಹಿಳಾ ಟೆಸ್ಟ್ ಪಂದ್ಯ; ಭಾರತ ಮೊದಲು ಬ್ಯಾಟಿಂಗ್‌

India Women vs England Women Test: ಭಾರತ ವನಿತಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದೆ. 142 ವರ್ಷಗಳಲ್ಲಿ ಇಲ್ಲಿ ಮಹಿಳಾ ಟೆಸ್ಟ್ ನಡೆಯುತ್ತಿರುವುದು ಇದೇ ಮೊದಲು. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ಬ್ಯಾಟಿಂಗ್ ಆರಂಭಿಸಿದೆ. ಭಾರತ ತಂಡವು ಕಳೆದ 31 ವರ್ಷಗಳಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಸೋತಿಲ್ಲ, ತನ್ನ ಅಜೇಯ ದಾಖಲೆಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

IND vs ENG: ಲಾರ್ಡ್ಸ್‌ ಮೈದಾನದಲ್ಲಿ ಮೊದಲ ಮಹಿಳಾ ಟೆಸ್ಟ್ ಪಂದ್ಯ; ಭಾರತ ಮೊದಲು ಬ್ಯಾಟಿಂಗ್‌
Ind W Vs Eng W

Updated on: Jul 10, 2026 | 3:57 PM

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿದ್ದ ಭಾರತ ವನಿತಾ ಪಡೆ ಇದೀಗ ಇಂಗ್ಲೆಂಡ್‌ ಮಹಿಳಾ ತಂಡದ (India Women vs England Women) ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಉಭಯ ತಂಡಗಳ ನಡುವೆ ಇಂದಿನಿಂದ ಅಂದರೆ ಜುಲೈ 10 ರಿಂದ ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಟೆಸ್ಟ್ ಪಂದ್ಯ (Lord’s Women’s Test) ಆರಂಭವಾಗಿದೆ. 142 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಲಾರ್ಡ್ಸ್‌ ಮೈದಾನದಲ್ಲಿ ಮಹಿಳಾ ಟೆಸ್ಟ್​ ಪಂದ್ಯವೊಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಭಾರತ ಮಹಿಳಾ ತಂಡ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ಅಖಾಡಕ್ಕಿಳಿದಿವೆ.

ಇಂಗ್ಲೆಂಡ್ ವಿರುದ್ಧ ಭಾರತದ ಮೇಲುಗೈ

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉತ್ತಮ ದಾಖಲೆಯನ್ನು ಹೊಂದಿದೆ. ಕಳೆದ 31 ವರ್ಷಗಳಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಭಾರತ ಕೊನೆಯ ಬಾರಿಗೆ 1995 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಸೋತಿತ್ತು. ಇದಾದ ನಂತರ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ 15 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಒಂದರಲ್ಲಿ ಸೋತಿದೆ. ಉಳಿದಂತೆ 11 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಇಂಗ್ಲೆಂಡ್ ವಿರುದ್ಧದ ಕೊನೆಯ ನಾಲ್ಕು ಟೆಸ್ಟ್‌ಗಳಲ್ಲಿ ಭಾರತ ಮೂರರಲ್ಲಿ ಗೆದ್ದಿದ್ದು, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಉಭಯ ತಂಡಗಳು

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೇಹ ರಾಣಾ, ಸಯಾಲಿ ಸತ್ಘರೆ, ಶ್ರೀ ಚರಣಿ (ಟೆಸ್ಟ್‌ಗೆ ಪಾದಾರ್ಪಣೆ) ಮತ್ತು ಕ್ರಾಂತಿ ಗೌಡ್.

ಇಂಗ್ಲೆಂಡ್‌ ತಂಡ: ಟ್ಯಾಮಿ ಬ್ಯೂಮಾಂಟ್, ಮಾಯಾ ಬೌಚಿಯರ್, ಹೀದರ್ ನೈಟ್, ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಆಲಿಸ್ ಕ್ಯಾಪ್ಸೆ (ಚೊಚ್ಚಲ ಟೆಸ್ಟ್ ಪಂದ್ಯ), ಆಮಿ ಜೋನ್ಸ್ (ವಿಕೆಟ್ ಕೀಪರ್), ಮ್ಯಾಡಿ ವಿಲಿಯರ್ಸ್ (ಚೊಚ್ಚಲ ಟೆಸ್ಟ್ ಪಂದ್ಯ), ಸೋಫಿ ಎಕ್ಲೆಸ್ಟೋನ್, ಇಸ್ಸಿ ವಾಂಗ್, ಲಾರೆನ್ ಬೆಲ್ ಮತ್ತು ಲಾರೆನ್ ಫೈಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Fri, 10 July 26

Follow Us