ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ರೋಚಕ ಜಯ ಸಾಧಿಸಿದೆ. ಗೆಲುವಿಗೆ 148 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಾಟದಲ್ಲಿ 8 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಈ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇತ್ತ ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್‌ಗೇರಿದ ಕೂಡಲೇ ಅತ್ತ ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸಲಿದೆ. ಇಲ್ಲದಿದ್ದರೆ ಸತತ ಮೂರನೇ ಬಾರಿಗೆ ಫೈನಲ್ ಆಡುವ ಟೀಂ ಇಂಡಿಯಾದ ಕನಸು ಭಗ್ನಗೊಳ್ಳಲಿದೆ.
ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಈ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, 3 ಪಂದ್ಯಗಳಲ್ಲಿ ಸೋಲು ಎದುರಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನ ಶೇಕಡಾವಾರು 66.67 ಆಗಿದ್ದು ಡಬ್ಲ್ಯುಟಿಸಿ ಫೈನಲ್‌ಗೆ ಮೊದಲ ತಂಡವಾಗಿ ಎಂಟ್ರಿಕೊಟ್ಟಿದೆ.
ಇದೀಗ ದಕ್ಷಿಣ ಆಫ್ರಿಕಾ ಒಂದು ಸ್ಥಾನವನ್ನು ಭರ್ತಿ ಮಾಡಿರುವುದರಿಂದಾಗಿ ಉಳಿದಿರುವ ಏಕೈಕ ಸ್ಥಾನಕ್ಕೆ ಆಸ್ಟ್ರೇಲಿಯ ಹಾಗೂ ಭಾರತದ ನಡುವೆ ಪೈಪೋಟಿ ಏರ್ಪಟ್ಟಿದೆ. ಭಾರತದ ಪ್ರಸ್ತುತ ಗೆಲುವಿನ ಶೇಕಡಾವಾರು 55.88 ಆಗಿದ್ದರೆ ಆಸ್ಟ್ರೇಲಿಯಾದ 58.89 ಆಗಿದೆ. ಅಂಕಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತ ತಂಡ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡರೆ ಪ್ರಶಸ್ತಿ ಸುತ್ತಿಗೆ ನೇರ ಪ್ರವೇಶ ಪಡೆಯಲಿದೆ. ಪ್ರಸ್ತುತ ಐದು ಪಂದ್ಯಗಳ ಟೆಸ್ಟ್ ಸರಣಿಯು 1-1 ರಲ್ಲಿ ಸಮಬಲವಾಗಿರುವುದರಿಂದ ನಾಲ್ಕನೇ ಟೆಸ್ಟ್ ಫಲಿತಾಂಶದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಏಕಾಂಗಿಯಾಗಿ ಫೈನಲ್ ತಲುಪಲು ಆಸ್ಟ್ರೇಲಿಯಾ ಸರಣಿ ಏಕೈಕ ಅವಕಾಶವಾಗಿದೆ. ಪ್ರಸ್ತುತ ಆವೃತ್ತಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಹೊರತುಪಡಿಸಿ ಬೇರೆ ಯಾರ ವಿರುದ್ಧವೂ ಟೆಸ್ಟ್ ಸರಣಿಯನ್ನು ಆಡುವುದಿಲ್ಲ. ಅದೇ ಸಮಯದಲ್ಲಿ ಆಸ್ಟ್ರೇಲಿಯಾ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸರಣಿ ಗೆದ್ದರೂ ಅಥವಾ ಉಳಿದೆರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದು, ಶ್ರೀಲಂಕಾ ವಿರುದ್ಧದ 2 ಪಂದ್ಯಗಳನ್ನು ಗೆದ್ದರೆ ಸಲ್ಲಿಸಾಗಿ ಡಬ್ಲ್ಯುಟಿಸಿ ಫೈನಲ್ಗೇರಲಿದೆ. ಹೀಗಾಗಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ