U19 World Cup Final: ಇಂದು ಅಂಡರ್-19 ವಿಶ್ವಕಪ್ ಫೈನಲ್: 5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇಂಗ್ಲೆಂಡ್ ಸವಾಲು

| Updated By: Vinay Bhat

Updated on: Feb 05, 2022 | 7:36 AM

England U19 vs India U19: ಐಸಿಸಿ ಅಂಡರ್ – 19 ವಿಶ್ವಕಪ್​ ಅಂತಿಮ ಹಂತಕ್ಕೆ ಬಂದು ತಲುಪಿದ್ದು ಇಂದು ಫೈನಲ್ ಕಾದಾಟ ನಡೆಯಲಿದೆ. ಲೀಗ್ ಹಂತದಿಂದ ಸೆಮಿ ಫೈನಲ್ ವರೆಗೆ ಒಂದೇ ಒಂದು ಸೋಲನ್ನು ಕಾಣದೆ ಕೋವಿಡ್ ನಡುವೆಯೂ ಅಮೋಘ ಪ್ರದರ್ಶನ ನೀಡಿ ಫೈನಲ್​ಗೇರಿರುವ ಭಾರತವೇ ಪ್ರಶಸ್ತಿ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿದೆ.

U19 World Cup Final: ಇಂದು ಅಂಡರ್-19 ವಿಶ್ವಕಪ್ ಫೈನಲ್: 5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇಂಗ್ಲೆಂಡ್ ಸವಾಲು
U19 World Cup Final IND vs ENG
Follow us on

ಐಸಿಸಿ ಅಂಡರ್ – 19 ವಿಶ್ವಕಪ್ (ICC Under 19 World Cup 2022)​ ಅಂತಿಮ ಹಂತಕ್ಕೆ ಬಂದು ತಲುಪಿದ್ದು ಇಂದು ಫೈನಲ್ ಕಾದಾಟ ನಡೆಯಲಿದೆ. ಒಂದು ಪ್ರಶಸ್ತಿಗಾಗಿ 4 ಬಾರಿಯ ಚಾಂಪಿಯನ್‌ ಭಾರತಕ್ಕೆ ಇಂಗ್ಲೆಂಡ್‌ (England U19 vs India U19) ಸವಾಲೊಡ್ಡಲಿದೆ. ಕೆರಿಬಿಯನ್‌ ದ್ವೀಪದ ನಾರ್ತ್‌ ಸೌಂಡ್‌ನ‌ ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. 2016, 2018, 2020 ಮತ್ತು 2022ರಲ್ಲಿ ಸತತವಾಗಿ ಫೈನಲ್‍ಗೆ ಅರ್ಹತೆ ಗಳಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಅಂಡರ್-19 ತಂಡ ಪಾತ್ರವಾಗಿದೆ. 2016ರ ಫೈನಲ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತು ರನ್ನರ್ ಅಪ್ ಆದರೆ, 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು. ಬಳಿಕ 2020ರಲ್ಲಿ ಬಾಂಗ್ಲದೇಶ ವಿರುದ್ಧ ಸೋತು ರನ್ನರ್ ಅಪ್ ಆದರೆ, ಇದೀಗ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯ ಆಡಬೇಕಾಗಿದೆ. ಇಲ್ಲಿ ಗೆದ್ದರೆ 5ನೇ ಬಾರಿ ಅಂಡರ್-19 ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದ ವಿಶೇಷ ಸಾಧನೆ ಮಾಡಲಿದೆ.

ಲೀಗ್ ಹಂತದಿಂದ ಸೆಮಿ ಫೈನಲ್ ವರೆಗೆ ಒಂದೇ ಒಂದು ಸೋಲನ್ನು ಕಾಣದೆ ಕೋವಿಡ್ ನಡುವೆಯೂ ಅಮೋಘ ಪ್ರದರ್ಶನ ನೀಡಿ ಫೈನಲ್​ಗೇರಿರುವ ಭಾರತವೇ ಪ್ರಶಸ್ತಿ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿದೆ. ಹೌದು, ಭಾರತಕ್ಕೆ ಫೈನಲ್ ಹಾದಿಯು ಸುಗಮವಾಗಿರಲಿಲ್ಲ. ಗುಂಪು ಹಂತದ ಟೂರ್ನಿ ನಡೆದಾಗ ನಾಯಕ ಯಶ್ ಧುಳ್ ಮತ್ತು ನಾಲ್ವರು ಆಟಗಾರರು ಕೋವಿಡ್‌ಗೆ ತುತ್ತಾಗಿದ್ದರು. ಚೇತರಿಸಿಕೊಂಡ ನಂತರ ಮರಳಿದ ಅವರು ಗೆಲುವಿನ ರೂವಾರಿಗಳಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ ಯಶ್ ಮತ್ತು 94 ರನ್ ಗಳಿಸಿದ ಶೇಖ್ ರಶೀದ್ ಜಯದ ಕಾಣಿಕೆ ನೀಡಿದ್ದರು.

ಅವರಲ್ಲದೇ ಆರಂಭಿಕ ಜೋಡಿ ಅಂಗಕ್ರಿಷ್ ರಘುವಂಶಿ ಮತ್ತು ಹರ್ನೂರ್ ಸಿಂಗ್ ಅವರು ಸೆಮಿಫೈನಲ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಫೈನಲ್‌ನಲ್ಲಿ ತಮ್ಮ ಲಯಕ್ಕೆ ಮರಳುವ ವಿಶ್ವಾಸವಿದೆ. ಬೌಲಿಂಗ್‌ನಲ್ಲಿ ಮಧ್ಯಮವೇಗಿ ರಾಜವರ್ಧನ್ ಹಂಗರಗೇಕರ್, ಎಡಗೈ ಬೌಲರ್ ರವಿಕುಮಾರ್ ಮತ್ತು ಸ್ಪಿನ್ನರ್ ವಿಕಿ ಓಸ್ವಾಲ್ ಅಮೋಘ ಲಯದಲ್ಲಿದ್ದಾರೆ. ಎದುರಾಳಿ ತಂಡಗಳ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ವಿಕಿ ಓಸ್ವಾಲ್ 12 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ತಂಡವೂ ಇತಿಹಾಸ ಬರೆಯುವ ಛಲದಲ್ಲಿದೆ. 24 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವತ್ತ ಚಿತ್ತ ನೆಟ್ಟಿದೆ. ಟಾಮ್‌ ಪ್ರಸ್ಟ್‌ ನಾಯಕತ್ವದ ಇಂಗ್ಲೆಂಡ್‌ ಆಸ್ಟ್ರೇಲಿಯದಷ್ಟು ಬಲಿಷ್ಠವಲ್ಲ. ಆದರೆ, ತಂಡದಲ್ಲಿ ಸ್ಟಾರ್ ಆಟಗಾರರ ದಂಡಿದೆ. ಯಾವುದೇ ಸಂದರ್ಭದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ವಿಶೇಷ ಎಂದರೆ ಭಾರತ ಮತ್ತು ಇಂಗ್ಲೆಂಡ್‌ ಲೀಗ್‌ ಹಂತದ ಮೂರೂ ಪಂದ್ಯಗಳನ್ನು ಗೆದ್ದಿವೆ. ಬಳಿಕ ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ ಹರ್ಡಲ್ಸ್‌ ಕೂಡ ದಾಟಿವೆ. ಹೀಗಾಗಿ ಈ ಫೈನಲ್ ಫೈಟ್ ಮೇಲೆ ಎಲ್ಲರ ಕಣ್ಣಿದೆ.

ಪಂದ್ಯ ಎಷ್ಟು ಗಂಟೆಗೆ?:

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 6:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ.

ಮಳೆ ಸಾಧ್ಯತೆ:

ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ದಿನ ಅಂಟಿಗುವಾದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯಕ್ಕೆ ಕೆಲ ಕಾಲ ಮಳೆ ಅಡ್ಡಿಯಾಗಬಹುದು. ವಿಳಂಬವಾಗಿ ಪಂದ್ಯ ನಡೆಯುವ ಸಾಧ್ಯತೆಯೂ ಇದೆ.

ಪಿಚ್ ರಿಪೋರ್ಟ್:

ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಆಂಡಿ ರಾಬರ್ಟ್ಸ್ ಎಂಡ್ ಮತ್ತು ಕರ್ಟ್ಲಿ ಆಂಬ್ರೋಸ್ ಎಂಡ್‌ಈ ಎರಡು ಬೌಲಿಂಗ್ ಎಂಡ್‌ಗಳನ್ನು ಹೊಂದಿದೆ. ಈ ಪಿಚ್ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಕ್ಕೂ ಸಮವಾಗಿ ಬೆಂಬಲಿಸುತ್ತದೆ. ಈ ಮೈದಾನದಲ್ಲಿ ಏಕದಿನ ಕ್ರಿಕೆಟ್‌ನ ಸರಾಸರಿ ಸ್ಕೋರ್ 239 ಆಗಿದ್ದು ಯಾವ ರೀತಿಯಾಗಿ ಪಿಚ್ ವರ್ತಿಸುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ. ಔಟ್ ಫೀಲ್ಡ್ ವೇಗವಾಗಿದ್ದು ಬ್ಯಾಟರ್‌ಗಳು ಇದರ ಲಾಭವನ್ನು ಪಡೆಯಬಹುದಾಗಿದೆ.

IND vs WI: 3 ಸ್ಟಾರ್ ಪ್ಲೇಯರ್ಸ್ ಔಟ್: ಒಬ್ಬ ಪದಾರ್ಪಣೆ: ಮೊದಲ ಏಕದಿನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI