ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಎಚ್ಚೆತ್ತುಕೊಂಡಿದೆ. ಮೊದಲ ಪಂದ್ಯದಲ್ಲಿ ಆಂಗ್ಲರು ಹೆಣೆದ ರಣತಂತ್ರವನ್ನೇ ಇದೀಗ ಪ್ರತಿತಂತ್ರವಾಗಿ ಪ್ರಯೋಗಿಸಲು ಭಾರತ ತಂಡ ಮುಂದಾಗಿದೆ. ಇದಕ್ಕಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೂವರು ಸ್ಪಿನ್ನರ್ ಹಾಗೂ ಓರ್ವ ವೇಗಿಯನ್ನು ಮಾತ್ರ ಕಣಕ್ಕಿಳಿಸಿದ್ದರು. ಅಲ್ಲದೆ ನಾಲ್ಕನೇ ಸ್ಪಿನ್ನರ್ ಆಗಿ ಜೋ ರೂಟ್ ಅವರನ್ನು ಬಳಿಸಿಕೊಂಡಿದ್ದರು. ಅಂದರೆ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಪರ ನಾಲ್ವರು ಸ್ಪಿನ್ನರ್ಗಳು ಬೌಲಿಂಗ್ ಮಾಡಿದ್ದರು.
ಇದೀಗ ಇದೇ ರಣತಂತ್ರವನ್ನು ಪ್ರಯೋಗಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ವಿಶಾಖಪಟ್ಟಣದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಲ್ವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿ. ಹೀಗಾಗಿ ಆಡುವ ಬಳಗದಲ್ಲಿ ನಾಲ್ವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಯೋಜನೆ ರೂಪಿಸುತ್ತಿದೆ.
ಅದರಂತೆ ಭಾರತದ ಪರ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯುವುದು ಖಚಿತ. ಇನ್ನು ಮೂರನೇ ಆಲ್ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಸಿಗಬಹುದು. ಹಾಗೆಯೇ ಪರಿಪೂರ್ಣ ಸ್ಪಿನ್ನರ್ ರೂಪದಲ್ಲಿ ಕುಲ್ದೀಪ್ ಯಾದವ್ ಕಣಕ್ಕಿಳಿಯಬಹುದು.
ನಾಲ್ವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲು ಮುಂದಾದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಿಂದ ಮೊಹಮ್ಮದ್ ಸಿರಾಜ್ ಹೊರಬೀಳಲಿದ್ದಾರೆ. ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಸಿರಾಜ್ ಬದಲಿಗೆ ಕುಲ್ದೀಪ್ ಯಾದವ್ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.
ಇತ್ತ ದ್ವಿತೀಯ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆ ಕಾರಣ ಜಡ್ಡು ಅಲಭ್ಯರಾದರೆ, ತೊಡೆಸಂಧು ನೋವಿನ ಸಮಸ್ಯೆಯ ಕಾರಣ ಕೆಎಲ್ ರಾಹುಲ್ ದ್ವಿತೀಯ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಇಲ್ಲಿ ಇಬ್ಬರು ಆಟಗಾರರು ಹೊರಗುಳಿದಿರುವ ಕಾರಣ ಮತ್ತಿಬ್ಬರು ಆಟಗಾರರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಅವಕಾಶವಿದೆ. ಅದರಂತೆ ಇಲ್ಲಿ ಜಡೇಜಾ ಸ್ಥಾನದಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಅವಕಾಶ ದೊರೆಯಲಿದೆ.
ಇದನ್ನೂ ಓದಿ: IPL 2024: RCB ಗೆ ವಿಂಡೀಸ್ ವೇಗಿ?
ಹಾಗೆಯೇ ಕೆಎಲ್ ರಾಹುಲ್ ಸ್ಥಾನದಲ್ಲಿ ಸರ್ಫರಾಝ್ ಖಾನ್ ಅಥವಾ ರಜತ್ ಪಾಟಿದಾರ್ ಕಾಣಿಸಿಕೊಳ್ಳಬಹುದು. ಈ ಮೂಲಕ ಬಲಿಷ್ಠ ಪಡೆಯೊಂದಿಗೆ ಇಂಗ್ಲೆಂಡ್ ತಂಡವನ್ನು ಅಣಿಯಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.