IND vs NZ: ಟೆಸ್ಟ್ ಸರಣಿ ಸೋಲು; ಭಾರತದ ಡಬ್ಲ್ಯುಟಿಸಿ ಫೈನಲ್ ಹಾದಿ ಮತ್ತಷ್ಟು ಕಠಿಣ

|

Updated on: Oct 26, 2024 | 4:49 PM

WTC Points Table: ಬಾಂಗ್ಲಾದೇಶವನ್ನು ಸುಲಭವಾಗಿ ಸೋಲಿಸಿದ್ದ ಭಾರತ ತಂಡವು ಇದೀಗ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿದೆ. ಪುಣೆಯಲ್ಲಿನ ಟೆಸ್ಟ್ ಸೋಲಿನಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವುದು ಕಷ್ಟವಾಗಿದೆ. ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು ಕಡಿಮೆಯಾಗಿದೆ. ಇದರ ಹೊರತಾಗಿಯೂ ತಂಡ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

IND vs NZ: ಟೆಸ್ಟ್ ಸರಣಿ ಸೋಲು; ಭಾರತದ ಡಬ್ಲ್ಯುಟಿಸಿ ಫೈನಲ್ ಹಾದಿ ಮತ್ತಷ್ಟು ಕಠಿಣ
ಟೀಂ ಇಂಡಿಯಾ
Follow us on

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ, ಕಿವೀಸ್ ತಂಡವನ್ನು ಹಾಗೆಯೇ ಸೋಲಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದೆಲ್ಲ ಲೆಕ್ಕಾಚಾರವನ್ನು ಕಿವೀಸ್ ಪಡೆ ಬುಡಮೇಲು ಮಾಡಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇತ್ತ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತ ನೋವಿನಲ್ಲಿರುವ ರೋಹಿತ್ ಪಡೆಗೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್​ನಿಂದ ಹೊರಗುಳಿಯುವ ಆತಂಕ ಎದುರಾಗಿದೆ. ವಾಸ್ತವವಾಗಿ ಕಿವೀಸ್ ವಿರುದ್ಧದ ಸರಣಿಗೂ ಮುನ್ನ ಡಬ್ಲ್ಯುಟಿಸಿ ಫೈನಲ್​ಗೆ ಪ್ರಮುಖ ಸ್ಪರ್ಧಿಯಾಗಿದ್ದ ಟೀಂ ಇಂಡಿಯಾ ಇದೀಗ ರೇಸ್​ನಿಂದ ಹೊರಗುಳಿಯುವ ಆತಂಕದಲ್ಲಿದೆ. ಇದಲ್ಲದೆ ಪುಣೆ ಟೆಸ್ಟ್ ಸೋಲಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲೂ ತಂಡದ ಗೆಲುವಿನ ಶೇಕಡಾವಾರುವಿನಲಿ ಭಾರಿ ಕುಸಿತ ಕಂಡುಬಂದಿದೆ.

ಪುಣೆ ಟೆಸ್ಟ್ ಸೋಲಿನ ಪರಿಣಾಮವೇನು?

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಪುಣೆ ಟೆಸ್ಟ್‌ಗೂ ಮುನ್ನ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ 68.06 ಶೇಕಡಾ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಉಳಿದಂತೆ ಆಸ್ಟ್ರೇಲಿಯಾ ತಂಡವು 62.50 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಇದಲ್ಲದೇ ಶೇ.55.56 ಅಂಕಗಳೊಂದಿಗೆ ಶ್ರೀಲಂಕಾ ಮೂರನೇ ಸ್ಥಾನದಲ್ಲಿದ್ದರೆ, ಶೇ.47.62 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದ್ದು, ಶೇ.44.44 ಅಂಕಗಳೊಂದಿಗೆ ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿತ್ತು.

ಆದರೆ ಪುಣೆಯಲ್ಲಿನ ಸೋಲಿನ ನಂತರ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 62.82ಕ್ಕೆ ಇಳಿದಿದೆ. ಆದಾಗ್ಯೂ, ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಈ ಸೋಲಿನ ಹೊರತಾಗಿಯೂ, ರೋಹಿತ್ ಶರ್ಮಾ ತಂಡವು ಶೇಕಡಾ 0.32 ಅಂಕಗಳ ಅಂತರದಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಆದರೆ ಈ ಗೆಲುವಿನಿಂದ ನ್ಯೂಜಿಲೆಂಡ್ ತಂಡಕ್ಕೆ ಖಂಡಿತವಾಗಿಯೂ ಲಾಭವಾಗಿದ್ದು, ಶೇಕಡಾ 50ರಷ್ಟು ಗೆಲುವಿನ ಶೇಕಡಾವಾರುವಿನೊಂದಿಗೆ ಕಿವೀಸ್ ಪಡೆ ಇದೀಗ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಬಂದಿದೆ.

ಡಬ್ಲ್ಯುಟಿಸಿ ಫೈನಲ್‌ನಿಂದ ಟೀಂ ಇಂಡಿಯಾ ಔಟ್?

ಪುಣೆ ಟೆಸ್ಟ್‌ನಲ್ಲಿ ಸೋಲಿನ ನಂತರ, ಭಾರತ ತಂಡವು ಡಬ್ಲ್ಯುಟಿಸಿ ಫೈನಲ್‌ನ ರೇಸ್‌ನಿಂದ ಹೊರಗುಳಿಯುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ?. ಪ್ರಸ್ತುತ ಟೀಂ ಇಂಡಿಯಾ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಇನ್ನು 6 ಟೆಸ್ಟ್ ಪಂದ್ಯಗಳು ಆಡಬೇಕಿದೆ. ಹೀಗಾಗಿ ರೋಹಿತ್ ಪಡೆ ಯಾವುದೇ ತಂಡವನ್ನು ಅವಲಂಬಿಸದೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ, ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಆದರೆ ಈ 4 ಪಂದ್ಯಗಳನ್ನು ಗೆಲ್ಲುವುದು ಟೀಂ ಇಂಡಿಯಾಕ್ಕೆ ಅಷ್ಟು ಸುಲಭವಲ್ಲ. ಏಕೆಂದರೆ ಟೀಂ ಇಂಡಿಯಾ ಇನ್ನೊಂದು ಪಂದ್ಯವನ್ನು ಇನ್-ಫಾರ್ಮ್ ನ್ಯೂಜಿಲೆಂಡ್ ವಿರುದ್ಧ ಆಡಬೇಕಿದ್ದರೆ, ಉಳಿದ 5 ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ.

ಉಳಿದ ತಂಡಗಳ ಲೆಕ್ಕಾಚಾರ ಹೀಗಿದೆ

ಇನ್ನು ಡಬ್ಲ್ಯುಟಿಸಿ ಫೈನಲ್ ರೇಸ್​ನಲ್ಲಿ ಟೀಂ ಇಂಡಿಯಾದೊಂದಿಗೆ ಸ್ಪರ್ಧೆಗೆ ಬಿದ್ದಿರುವ ತಂಡಗಳನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೆ ಈ ಸೀಸನ್​ನಲ್ಲಿ 4 ಪಂದ್ಯಗಳು ಬಾಕಿ ಉಳಿದಿದ್ದು, ಅದರಲ್ಲಿ 3ಪಂದ್ಯಗಳನ್ನು ಗೆದ್ದರೆ ಡಬ್ಲ್ಯುಟಿಸಿ ಫೈನಲ್​ಗೆ ಅರ್ಹತೆ ಪಡೆಯಲ್ಲಿದೆ. ಇದರಲ್ಲಿ 2 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ, ಉಳಿದ 2 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಬೇಕಿದೆ.

ಇದಲ್ಲದೆ, ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಈ ಸೀಸನ್​ನಲ್ಲಿ ಇನ್ನು 4 ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಒಂದು ಪಂದ್ಯವನ್ನು ಮುಂಬೈನಲ್ಲಿ ಭಾರತದ ವಿರುದ್ಧ ಆಡಬೇಕಾಗಿದೆ. ಉಳಿದ 3 ಪಂದ್ಯಗಳನ್ನು ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಿದೆ. ನೇರವಾಗಿ ಫೈನಲ್‌ಗೆ ಹೋಗಲು ನ್ಯೂಜಿಲೆಂಡ್ ಈ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು.

ಹಾಗೆಯೇ ಈ ಎರಡು ತಂಡಗಳೊಂದಿಗೆ ದಕ್ಷಿಣ ಆಫ್ರಿಕಾ ಕೂಡ ಡಬ್ಲ್ಯುಟಿಸಿ ಫೈನಲ್​ಗೆ ಹೋಗುವ ಅವಕಾಶ ಹೊಂದಿದ್ದು, ಇದಕ್ಕಾಗಿ ತಂಡ ಇನ್ನುಳಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಬೇಕಿದೆ. ಈ ಪೈಕಿ ಬಾಂಗ್ಲಾದೇಶದ ವಿರುದ್ಧ 1 ಪಂದ್ಯ ಹಾಗೂ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sat, 26 October 24