IND vs WI: ಯಶಸ್ವಿ-ರೋಹಿತ್ ಭರ್ಜರಿ ಬ್ಯಾಟಿಂಗ್: ಹೊಸ ದಾಖಲೆ ನಿರ್ಮಾಣ

| Updated By: ಝಾಹಿರ್ ಯೂಸುಫ್

Updated on: Jul 20, 2023 | 10:56 PM

India vs West Indies: ಈ ಪಂದ್ಯದ ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ 26 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ರೋಹಿತ್ ಶರ್ಮಾ (63) ಹಾಗೂ ಯಶಸ್ವಿ ಜೈಸ್ವಾಲ್ (52) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

IND vs WI: ಯಶಸ್ವಿ-ರೋಹಿತ್ ಭರ್ಜರಿ ಬ್ಯಾಟಿಂಗ್: ಹೊಸ ದಾಖಲೆ ನಿರ್ಮಾಣ
Rohit Sharma-Yashasvi Jaiswal
Follow us on

India vs West Indies: ಪೋರ್ಟ್​ ಆಫ್ ಸ್ಪೇನ್​ನಲ್ಲಿ ನಡೆಯುತ್ತಿರುವ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.

ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಆ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ ಯುವ ದಾಂಡಿಗನ ಬ್ಯಾಟ್​ನಿಂದ ರನ್​ ಮಳೆ ಹರಿದು ಬಂತು. ಮತ್ತೊಂದೆಡೆ ರಕ್ಷಣಾತ್ಮಕ ಆಟದೊಂದಿಗೆ ರನ್​ ಕಲೆಹಾಕಿದ ರೋಹಿತ್ ಶರ್ಮಾ 74 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ನಾಯಕ ಹಾಫ್ ಸೆಂಚುರಿ ಸಿಡಿಸುತ್ತಿದ್ದಂತೆ ರನ್​ಗಳಿಕೆ ವೇಗ ಹೆಚ್ಚಿಸಿದ ಯಶಸ್ವಿ ಜೈಸ್ವಾಲ್ ವಿಂಡೀಸ್ ಬೌಲರ್​ಗಳ ಬೌಲರ್​ಗಳ ಬೆಂಡೆತ್ತಿದರು. ಅಲ್ಲದೆ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಇತ್ತ ಇಬ್ಬರು ಆರಂಭಿಕರು ಅರ್ಧಶತಕ ಪೂರೈಸುವುದರೊಂದಿಗೆ ಟೀಮ್ ಇಂಡಿಯಾ ಮೊತ್ತ ಶತಕದ ಗಡಿದಾಟಿತು. ಇದರೊಂದಿಗೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಹೆಸರಿಗೆ ವಿಶೇಷ ದಾಖಲೆ ಕೂಡ ಸೇರ್ಪಡೆಯಾಯಿತು.

ಅಂದರೆ ವಿದೇಶಿ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿಗಳಲ್ಲಿ ಜೈಸ್ವಾಲ್-ಹಿಟ್​ಮ್ಯಾನ್ ಕೂಡ ಸೇರ್ಪಡೆಯಾದರು. ಅಲ್ಲದೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಕೇವಲ ತಮ್ಮ 2ನೇ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ ಸರಿಗಟ್ಟಿದರು.

ಇದಕ್ಕೂ ಮುನ್ನ ವಿದೇಶಿ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾದ ಆರಂಭಿಕರಾಗಿದ್ದ ಸುನಿಲ್ ಗವಾಸ್ಕರ್-ಚೇತನ್ ಶರ್ಮಾ (ಇಂಗ್ಲೆಂಡ್, 1979), ವೀರೇಂದ್ರ ಸೆಹ್ವಾಗ್-ಆಕಾಶ್ ಚೋಪ್ರಾ (ಆಸ್ಟ್ರೇಲಿಯಾ, 2003), ವೀರೇಂದ್ರ ಸೆಹ್ವಾಗ್-ವಾಸಿಂ ಜಾಫರ್ (ವೆಸ್ಟ್ ಇಂಡೀಸ್, 2006) ತಲಾ 2 ಶತಕಗಳ ಜೊತೆಯಾಟವಾಡಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲೂ ಶತಕದ ಜೊತೆಯಾಟವಾಡುವ ಮೂಲಕ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾ ಪರ ಸತತ ಟೆಸ್ಟ್​ಗಳಲ್ಲಿ ಶತಕದ ಜೊತೆಯಾಟವಾಡಿದ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೂ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸತತ 3 ಶತಕದ ಜೊತೆಯಾಟವಾಡಿದ ವೀರೇಂದ್ರ ಸೆಹ್ವಾಗ್ ಹಾಗೂ ಮುರಳಿ ವಿಜಯ್ (2008) ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಹಿಟ್​ಮ್ಯಾನ್ ಹಾಗೂ ಯಶಸ್ವಿ ಸತತ 2 ಬಾರಿ ಶತಕದ ಜೊತೆಯಾಟವಾಡುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿರುವುದು ವಿಶೇಷ.

ಇನ್ನು ಈ ಪಂದ್ಯದ ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ 26 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್​ ಕಲೆಹಾಕಿತು. ಆದರೆ ಈ ಬ್ರೇಕ್ ಬಳಿಕ ಮತ್ತೆ ಇನಿಂಗ್ಸ್​ ಆರಂಭಿಸಿದ ಯಶಸ್ವಿ ಜೈಸ್ವಾಲ್ (57) ಜೇಸನ್ ಹೋಲ್ಡರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 33 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ  1 ವಿಕೆಟ್ ನಷ್ಟಕ್ಕೆ 143 ರನ್​ ಕಲೆಹಾಕಿದೆ. ಕ್ರೀಸ್​ನಲ್ಲಿ ರೋಹಿತ್ ಶರ್ಮಾ (78) ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಟೀಮ್ ಇಂಡಿಯಾ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಜಯದೇವ್ ಉನದ್ಕತ್ , ಮುಖೇಶ್ ಕುಮಾರ್ , ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ತೇಜ್​ನರೈನ್ ಚಂದ್ರಪಾಲ್ , ಕಿರ್ಕ್ ಮೆಕೆಂಝಿ , ಜೆರ್ಮೈನ್ ಬ್ಲಾಕ್‌ವುಡ್ , ಅಲಿಕ್ ಅಥಾನಾಝ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) ಜೇಸನ್ ಹೋಲ್ಡರ್ , ಅಲ್ಝಾರಿ ಜೋಸೆಫ್ , ಕೆಮರ್ ರೋಚ್ , ಜೋಮೆಲ್ ವಾರಿಕನ್ , ಶಾನನ್ ಗೇಬ್ರಿಯಲ್.