ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ಗೂ ಮುನ್ನ ಟೀಂ ಇಂಡಿಯಾಕ್ಕೆ ಸಿಕ್ತು ಸಿಹಿ ಸುದ್ದಿ..!
2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಚಿನ್ನದ ಪದಕಕ್ಕಾಗಿ ಸೆಣಸಲಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಪಂದ್ಯಕ್ಕೆ ಹಾಜರಾಗದಿರುವುದು ಭಾರತ ತಂಡಕ್ಕೆ ಶುಭ ಸುದ್ದಿಯಾಗಿದೆ. ನಖ್ವಿ ಅವರ ಅನುಪಸ್ಥಿತಿಯಲ್ಲಿ, ಭಾರತ ತಂಡವು ಚಿನ್ನದ ಪದಕವನ್ನು ಗೆದ್ದರೆ, ಟ್ರೋಫಿ ಸ್ವೀಕರಿಸುವ ಹಿಂದಿನ ವಿವಾದಗಳನ್ನು ತಪ್ಪಿಸಿ, ಸಂಭ್ರಮಿಸಲು ಸಂಪೂರ್ಣ ಅವಕಾಶವನ್ನು ಪಡೆಯಲಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026 ರ ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಈವೆಂಟ್‌ನ ಫೈನಲ್ ಪಂದ್ಯವು ಅಕ್ಟೋಬರ್ 3 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಉಭಯ ದೇಶಗಳ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಭಾರತ ತಂಡಕ್ಕೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಫೈನಲ್ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವುದಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಫೈನಲ್‌ನಲ್ಲಿ ಭಾರತ ಗೆದ್ದರೆ, ಪದಕ ವಿತರಣೆಯಲ್ಲಿ ನಖ್ವಿ ಉಪಸ್ಥಿತಿ ಇರುವುದಿಲ್ಲ. ಹಾಗಾಗಿ ಭಾರತ, ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದರೆ, ಚಿನ್ನದ ಪದಕ ಹಿಡಿದು ಸಂಭ್ರಮಿಸಬಹುದು.
ಮೊಹ್ಸಿನ್ ನಖ್ವಿ ಗೈರು
ಏಷ್ಯನ್ ಗೇಮ್ಸ್ ಕ್ರಿಕೆಟ್ನ ಚಿನ್ನದ ಪದಕದ ಪಂದ್ಯ ಹಾಗೂ ಕಂಚಿನ ಪದಕದ ಪಂದ್ಯ ಒಂದೇ ದಿನ ನಡೆಯಲಿವೆ. ಮೊದಲಿಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಕಂಚಿನ ಪದಕದ ಪಂದ್ಯ ನಡೆಯಲಿದೆ. ಅದಾದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಚಿನ್ನದ ಪದಕದ ಪಂದ್ಯ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಎರಡೂ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣ ಬರಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಎಸಿಸಿ ನೀಡಿದೆ. ಪೂರ್ವ ನಿರ್ಧರಿತ ಕೆಲಸಗಳಿಂದಾಗಿ ನಖ್ವಿ ಈ ಎರಡು ಪಂದ್ಯಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಎಸಿಸಿ ತಿಳಿಸಿದೆ. ಆದಾಗ್ಯೂ, ಚಿನ್ನ ಮತ್ತು ಕಂಚಿನ ಪದಕ ಪಂದ್ಯಗಳಲ್ಲಿ ಭಾಗವಹಿಸುವ ಎಲ್ಲಾ ನಾಲ್ಕು ತಂಡಗಳಿಗೆ ನಖ್ವಿ ಶುಭ ಹಾರೈಸಿದ್ದಾರೆ.
ಟ್ರೋಫಿ ಸ್ವೀಕರಿಸಿದ ಟೀಂ ಇಂಡಿಯಾ
ಎಲ್ಲರಿಗೂ ತಿಳಿದಿರುವಂತೆ ಟೀಂ ಇಂಡಿಯಾ ಎರಡು ಏಷ್ಯಾಕಪ್ಗಳನ್ನು ಗೆದ್ದುಕೊಂಡಿದ್ದರೂ ಟ್ರೋಫಿ ಹಿಡಿದು ಸಂಭ್ರಮಿಸುವ ಅವಕಾಶ ಸಿಕ್ಕಿಲ್ಲ. ಪಹಲ್ಗಾಮ್ ದಾಳಿಯ ಬಳಿಕ ಭಾರತದ ಪುರುಷರ ಕ್ರಿಕೆಟ್ ತಂಡ 2025ರ ಏಷ್ಯಾಕಪ್ ಗೆದ್ದ ಬಳಿಕ ಮೊಹ್ಸಿನ್ ನಖ್ವಿ ಕೈನಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇನ್ನು ಈ ವರ್ಷ ಅಂದರೆ 2026 ರಲ್ಲಿ ನಡೆದ ಮಹಿಳೆಯರ ಏಷ್ಯಾಕಪ್ ಗೆದ್ದಿದ್ದ ಭಾರತ ಮಹಿಳಾ ತಂಡವೂ ನಖ್ವಿ ಕೈನಿಂದ ಟ್ರೋಫಿ ಸ್ವೀಕರಿಸಲಿಲ್ಲ. ಹೀಗಾಗಿ ಎರಡೂ ತಂಡಗಳು ಖಾಲಿ ಕೈನಲ್ಲಿ ದೇಶಕ್ಕೆ ವಾಪಸ್ಸಾಗಿದ್ದವು. ಇದೀಗ ಏಷ್ಯನ್ ಗೇಮ್ಸ್ನಲ್ಲೂ ನಖ್ವಿಯಿಂದಾಗಿ ಭಾರತಕ್ಕೆ ಚಿನ್ನದ ಪದಕವನ್ನು ಹಿಡಿದು ಸಂಭ್ರಮಿಸುವ ಅವಕಾಶ ಸಿಗುವುದಿಲ್ಲವೇನೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು.
ಏಷ್ಯನ್ ಗೇಮ್ಸ್ ಕ್ರಿಕೆಟ್; ಭಾರತ- ಪಾಕ್ ನಡುವಿನ ಫೈನಲ್ ಪಂದ್ಯದ ಪೂರ್ಣ ವಿವರ
ಆದಾಗ್ಯೂ ಈ ಪಂದ್ಯಕ್ಕೆ ನಖ್ವಿ ಹಾಜರಿದ್ದರೂ ಅವರನ್ನು ಪದಕ ವಿತರಣೆ ಸಮಾರಂಭಕ್ಕೆ ಆಹ್ವಾನಿಸುವ ಸಾಧ್ಯತೆಗಳಿರಲಿಲ್ಲ. ಏಕೆಂದರೆ ನಖ್ವಿ ಈ ಸಮಾರಂಭಕ್ಕೆ ಬಂದರೆ ಟೀಂ ಇಂಡಿಯಾ ಆಟಗಾರರು ಪದಕ ವಿತರಣೆಯಿಂದ ಹಿಂದೆ ಸರಿಯುವುದು ಖಚಿತವಾಗುತಿತ್ತು. ಹೀಗಾಗಿ ಕ್ರೀಡಾಕೂಟದಲ್ಲಿ ಯಾವುದೇ ವಿವಾದಗಳು ಹುಟ್ಟಿಕೊಳ್ಳದಂತೆ ತಡೆಯಲು ಆಯೋಜಕರು ನಖ್ವಿಯನ್ನು ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿಸುವ ಸಾಧ್ಯತೆಗಳಿರಲಿಲ್ಲ.




