IND W vs PAK W: ಪಾಕಿಸ್ತಾನ ನಮ್ಮ ಶತ್ರು.. ಶೇಕ್​ಹ್ಯಾಂಡ್ ಮಾಡದಂತೆ ವನಿತಾ ತಂಡಕ್ಕೂ ಬಿಸಿಸಿಐ ಸಂದೇಶ

India vs Pakistan Women's Cricket: ಭಾರತ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಮತ್ತೆ ಹೈವೋಲ್ಟೇಜ್ ಪಂದ್ಯ ಏರ್ಪಟ್ಟಿದೆ. ಏಷ್ಯಾಕಪ್ ಬಳಿಕ ಮಹಿಳಾ ವಿಶ್ವಕಪ್‌ನಲ್ಲಿ ಎದುರಾಗಲಿರುವ ಈ ಕದನಕ್ಕೆ ಬಿಸಿಸಿಐ ವಿಶೇಷ ನಿರ್ದೇಶನ ನೀಡಿದೆ. ಪಾಕ್ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಭಾರತ ತಂಡಕ್ಕೆ ಸೂಚಿಸಲಾಗಿದ್ದು, ಈ ಮೂಲಕ ಪಂದ್ಯದ ರೋಚಕತೆ ಹೆಚ್ಚಿದೆ. ಇತಿಹಾಸದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿದೆ.

IND W vs PAK W: ಪಾಕಿಸ್ತಾನ ನಮ್ಮ ಶತ್ರು.. ಶೇಕ್​ಹ್ಯಾಂಡ್ ಮಾಡದಂತೆ ವನಿತಾ ತಂಡಕ್ಕೂ ಬಿಸಿಸಿಐ ಸಂದೇಶ
Ind W Vs Pak W

Updated on: Oct 01, 2025 | 10:26 PM

ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳ ನಡುವಿನ ಜಿದ್ದಾಜಿದ್ದಿನ ಕಾಳಗವನ್ನು ಕಣ್ತುಂಬಿಕೊಂಡಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವನ್ನು ನೋಡುವ ಅವಕಾಶ ಒದಗಿ ಬಂದಿದೆ. ಏಷ್ಯಾಕಪ್‌ನಲ್ಲಿ ಉಭಯ ದೇಶಗಳ ಪುರುಷರ ತಂಡಗಳು ಮುಖಾಮುಖಿಯಾಗಿದ್ದರೆ, ಇದೀಗ ಮಹಿಳೆಯ ಏಕದಿನ ವಿಶ್ವಕಪ್​ನಲ್ಲಿ (Women’s World Cup ) ಎರಡೂ ದೇಶಗಳು ಎದುರುಬದುರಾಗುತ್ತಿವೆ. ಏಷ್ಯಾಕಪ್‌ನಂತೆಯೇ, ವಿಶ್ವಕಪ್​​ನಲ್ಲೂ ಉಭಯ ತಂಡಗಳ ನಡುವೆ ಹೈವೋಲ್ಟೇಜ್ ಕದನವನ್ನು ನಿರೀಕ್ಷೆಸಲಾಗಿದೆ. ಈ ನಡುವೆ ಬಿಸಿಸಿಐ, ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೂ ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಆದೇಶಿಸಿದೆ ಎಂದು ವರದಿಯಾಗಿದೆ. ಗಮನಾರ್ಹವಾಗಿ, ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಂದ್ಯಕ್ಕೂ ಮೊದಲು ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಿದ್ದು ಪರಿಣಾಮವಾಗಿ, ಈ ಎರಡು ತಂಡಗಳ ನಡುವಿನ ಸ್ಪರ್ಧೆ ಇನ್ನಷ್ಟು ರೋಚಕತೆ ಸೃಷ್ಟಿಸಲಿದೆ.

ಭಾರತ-ಪಾಕ್ ನಡುವೆ ಮತ್ತೆ ಕದನ

ಭಾರತ ಮತ್ತು ಪಾಕಿಸ್ತಾನಿ ಮಹಿಳಾ ತಂಡಗಳು ಭಾನುವಾರ ಮುಖಾಮುಖಿಯಾಗಲಿದ್ದು, ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಬಿಸಿಸಿಐ, ಭಾರತ ಮಹಿಳಾ ತಂಡಕ್ಕೆ ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಸೂಚಿಸಿದೆ. ಪಾಕ್ ಆಟಗಾರ್ತಿಯರೊಂದಿಗೆ ಶೇಕ್​ಹ್ಯಾಂಡ್ ಮಾಡದ ಕುರಿತು ಅಕ್ಟೋಬರ್ 1 ರಂದು ಟೀಂ ಇಂಡಿಯಾಕ್ಕೆ ಸಂದೇಶ ರವಾನಿಸಲಾಗಿದೆ. ವರದಿಯ ಪ್ರಕಾರ, ‘ವಿಶ್ವಕಪ್ ಸಮಯದಲ್ಲಿ ಭಾರತ ತಂಡವು ಪಾಕಿಸ್ತಾನಿ ತಂಡದೊಂದಿಗೆ ಕೈಕುಲುಕುವುಂತಿಲ್ಲ. ಹಿರಿಯ ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಭಾರತ ವನಿತಾ ತಂಡಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 5 ರಂದು ಪಂದ್ಯ

ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಆರಂಭವಾಗಿದೆ. ಈ ಐಸಿಸಿ ಈವೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಮಹಿಳಾ ತಂಡಗಳ ನಡುವೆ ಈ ಬರುವ ಭಾನುವಾರ, ಅಕ್ಟೋಬರ್ 5 ರಂದು ಕ್ರಿಕೆಟ್ ಹೋರಾಟ ನಡೆಯಲಿದೆ. ಇನ್ನು ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಕಳೆದ 20 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳು 11 ಬಾರಿ ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಪ್ರತಿ ಬಾರಿಯೂ ಭಾರತ ಗೆಲುವು ಸಾಧಿಸಿದೆ. ಅಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು 12 ನೇ ಬಾರಿಯಾಗಿದೆ. ಇದುವರೆಗಿನ ಭಾರತೀಯ ಮಹಿಳಾ ತಂಡದ ದಾಖಲೆಯನ್ನು ಗಮನಿಸಿದರೆ ಬರುವ ಭಾನುವಾರ ಕೂಡ ಪಾಕಿಸ್ತಾನ ವಿರುದ್ಧ 12-0 ಅಂತರದ ಗೆಲುವು ಸಾಧಿಸುವುದು ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ