T20 World Cup 2022: ಟಿ20 ವಿಶ್ವಕಪ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ (Team India) ಶುಭಾರಂಭ ಮಾಡಿದೆ. ಇದೀಗ ಅಕ್ಟೋಬರ್ 19 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಅಭ್ಯಾಸ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗಿದೆ. ವಿಶೇಷ ಎಂದರೆ ಇದೀಗ ಎಲ್ಲರ ಕಣ್ಣು ಟೀಮ್ ಇಂಡಿಯಾದ 2ನೇ ಅಭ್ಯಾಸ ಪಂದ್ಯದ ಮೇಲೆ ನೆಟ್ಟಿದೆ. ಏಕೆಂದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಿರಲಿಲ್ಲ. ಬದಲಾಗಿ ಬಹುತೇಕ ಆಟಗಾರರಿಗೆ ಅವಕಾಶ ನೀಡಿದ್ದರು.
ಅಂದರೆ ಅಭ್ಯಾಸ ಪಂದ್ಯದಲ್ಲಿ 15 ಆಟಗಾರರನ್ನು ವಿಭಿನ್ನ ಪಾತ್ರದಲ್ಲಿ ಬಳಸಿಕೊಳ್ಳುವ ಅವಕಾಶವಿದೆ. ಅದರಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊಹಮ್ಮದ್ ಶಮಿ ಅವರನ್ನು 20ನೇ ಓವರ್ ವೇಳೆ ಕರೆಸಿಕೊಂಡಿದ್ದರು. ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 11 ರನ್ ಬೇಕಿದ್ದ ವೇಳೆ ಶಮಿ ಮೂರು ವಿಕೆಟ್ ಹಾಗೂ ಒಂದು ರನೌಟ್ ಮಾಡುವ ಮೂಲಕ ಟೀಮ್ ಇಂಡಿಯಾಗೆ 6 ರನ್ಗಳ ಜಯ ತಂದುಕೊಟ್ಟಿದ್ದರು.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕೇವಲ 1 ಓವರ್ ಮಾತ್ರ ಮಾಡಿದ್ದರು. ಅಂದರೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಒಟ್ಟು 7 ಬೌಲರ್ಗಳನ್ನು ಬಳಸಿಕೊಂಡಿತ್ತು. ಇದಾಗ್ಯೂ ಅಕ್ಷರ್ ಪಟೇಲ್ಗೆ ಓವರ್ ನೀಡಿರಲಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ತಂಡದಲ್ಲಿ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಹಾಗೂ ಮೊಹಮ್ಮದ್ ಶಮಿ ಇದ್ದಾರೆ. ಇವರಲ್ಲಿ ಒಬ್ಬರನ್ನು ಕೈ ಬಿಡುವುದು ಖಚಿತ. ಆದರೆ ಯಾರನ್ನೂ ಕೈ ಬಿಡಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಏಕೆಂದರೆ 4ನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
ಅಂದರೆ ಇಲ್ಲಿ ಟೀಮ್ ಇಂಡಿಯಾ ಮೂವರು ಮುಖ್ಯ ವೇಗಿಗಳು ಹಾಗೂ ಓರ್ವ ವೇಗದ ಆಲ್ರೌಂಡರ್ ಜೊತೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಓರ್ವ ಅಥವಾ ಇಬ್ಬರು ಸ್ಪಿನ್ನರ್ಗೆ ಮಣೆಹಾಕಬಹುದು. ಆದರೆ ಇಲ್ಲಿ ಸ್ಪಿನ್ನರ್ಗಳ ವಿಷಯದಲ್ಲೂ ಪೈಪೋಟಿ ಇದೆ.
ತಂಡದಲ್ಲಿ ಸ್ಪಿನ್ ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಹಾಗೂ ಆಶ್ವಿನ್ ಇದ್ದಾರೆ. ಹಾಗೆಯೇ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಾಲ್ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಈ ಮೂವರಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಇತ್ತ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದ ಅಕ್ಷರ್ ಪಟೇಲ್ಗೆ ರೋಹಿತ್ ಶರ್ಮಾ ಬೌಲಿಂಗ್ ನೀಡಿರಲಿಲ್ಲ. ಇನ್ನು ಚಹಾಲ್ ಹಾಗೂ ಅಶ್ವಿನ್ಗೆ ಓವರ್ಗಳನ್ನು ನೀಡಿದ್ದರು. ಈ ವೇಳೆ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ 28 ರನ್ ನೀಡಿದರೆ, 3 ಓವರ್ ಬೌಲ್ ಮಾಡಿದ ಚಹಾಲ್ 28 ರನ್ ಬಿಟ್ಟುಕೊಟ್ಟಿದ್ದರು. ಇನ್ನು ಎಡಗೈ ಸ್ಪಿನ್ನರ್ ಆಗಿರುವ ಅಕ್ಷರ್ ಪಟೇಲ್ಗೆ ಓವರ್ ನೀಡದೇ ಅಚ್ಚರಿ ಮೂಡಿಸಿದರು. ಹೀಗಾಗಿ ಸ್ಪಿನ್ನರ್ ಆಗಿ ಯಾರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬುದು ನಿಗೂಢ.
ಇಲ್ಲಿ ಟೀಮ್ ಇಂಡಿಯಾ 6+5 ಲೆಕ್ಕಾಚಾರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಂದರೆ ಆರು ಬ್ಯಾಟ್ಸ್ಮನ್ಗಳು ಹಾಗೂ ಐದು ಬೌಲರ್ಗಳನ್ನು ಒಳಗೊಂಡ ಪ್ಲೇಯಿಂಗ್ ಇಲೆವೆನ್. ಅದರಂತೆ ಬ್ಯಾಟ್ಸ್ಮನ್ಗಳಾಗಿ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಸ್ಥಾನ ಪಡೆಯಲಿದ್ದಾರೆ. ಅದರ ಜೊತೆಗೆ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕೂಡ 6 ಮಂದಿಯ ಪಟ್ಟಿಯಲ್ಲಿ ಇರಲಿದ್ದಾರೆ. ಇನ್ನುಳಿದ ಐವರು ಬೌಲರ್ಗಳ ಆಯ್ಕೆಯೇ ಈಗ ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು.
ಅತ್ತ ವೇಗದ ಬೌಲಿಂಗ್ ವಿಭಾಗದಲ್ಲಿ 4 ಮಂದಿ ಇದ್ದು, ಇತ್ತ ಸ್ಪಿನ್ನರ್ಗಳ ವಿಭಾಗದಲ್ಲಿ ಮೂವರಿದ್ದಾರೆ. ಹೀಗಾಗಿ ಈ 7 ಮಂದಿಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ಸವಾಲು ಎದುರಾಗಿದೆ. ಏಕೆಂದರೆ ಇಲ್ಲಿ ಇಲ್ಲಿ ಸ್ಪಿನ್ನ್ ಆಲ್ರೌಂಡರ್ಗಳಾಗಿ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಇದ್ದಾರೆ. ಜೊತೆಗೆ ಚಹಾಲ್ ಕೂಡ ಮುಖ್ಯ ಸ್ಪಿನ್ನರ್ ಆಗಿ ತಂಡದಲ್ಲಿದ್ದಾರೆ. ಇದುವೇ ಈಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಒಂದು ವೇಳೆ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದರೆ ಓರ್ವ ಸ್ಪಿನ್ನರ್ಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ. ಹಾಗೆಯೇ ಹೆಚ್ಚುವರಿ ವೇಗಿಯಾಗಿ ಹಾರ್ದಿಕ್ ಪಾಂಡ್ಯರನ್ನು ಬಳಸಿಕೊಳ್ಳಬಹುದು. ಇಲ್ಲಿ ಟೀಮ್ ಇಂಡಿಯಾ ಇಬ್ಬರು ಸ್ಪಿನ್ನರ್ಗಳಿಗೆ ಅವಕಾಶ ನೀಡಿದ್ರೆ ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ…ಇವರಲ್ಲಿ ಒಬ್ಬರು ತಂಡದಿಂದ ಹೊರಗುಳಿಬೇಕಾಗುತ್ತದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ನಾಲ್ವರು ವೇಗಿಗಳಲ್ಲಿ ಯಾರನ್ನು ಕೈ ಬಿಡಲಿದ್ದಾರೆ ಎಂಬುದೇ ಈಗ ಕುತೂಹಲ.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್