T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
India vs Pakistan T20 World Cup 2022: ಅಕ್ಟೋಬರ್ 23 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ 2022 ರ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
Updated on: Oct 15, 2022 | 9:24 PM

ಟಿ20 ವಿಶ್ವಕಪ್ನಲ್ಲಿನ ಮಹಾ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕ್ ನಡುವಣ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಬಾರಿ ಅದು ಕೇವಲ ಇಂಡೋ-ಪಾಕ್ ಕದನವಾಗಿರುವುದಿಲ್ಲ. ಬದಲಾಗಿ ಸೂರ್ಯಕುಮಾರ್ vs ಮೊಹಮ್ಮದ್ ರಿಜ್ವಾನ್ ಕೂಡ ಆಗಿರಲಿದೆ.

ಏಕೆಂದರೆ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಇತ್ತೀಚೆಗೆ ನ್ಯೂಜಿಲೆಂಡ್ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪ್ರದರ್ಶನದ ಮೂಲಕ ಈ ವರ್ಷ ಟಿ20ಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಆದರೆ ಇತ್ತ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಸಹ ಹಿಂದೆ ಬಿದ್ದಿಲ್ಲ. ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯ ಈ ವರ್ಷ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇಲ್ಲಿ ಸೂರ್ಯಕುಮಾರ್ ಹಾಗೂ ಮೊಹಮ್ಮದ್ ರಿಜ್ವಾನ್ ನಡುವಣ ರನ್ಗಳ ವತ್ಯಾಸ ಕೇವಲ 20. ಹೀಗಾಗಿಯೇ ಭಾರತ - ಪಾಕ್ ನಡುವಣ ಪಂದ್ಯದ ಮೂಲಕ ಯಾರು ನಂಬರ್ 1 ಆಗಲಿದ್ದಾರೆ ಎಂಬ ಕುತೂಹಲ ಕೂಡ ಮನೆ ಮಾಡಿದೆ.

2022 ರಲ್ಲಿ 23 ಟಿ20 ಇನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ 801 ರನ್ ಕಲೆಹಾಕಿದರೆ, ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ 18 ಇನಿಂಗ್ಸ್ನಲ್ಲಿ 821 ರನ್ ಬಾರಿಸಿದ್ದಾರೆ. ಹೀಗಾಗಿ ಪಾಕ್ ವಿರುದ್ಧದ ಪಂದ್ಯದ ಮೂಲಕ ರಿಜ್ವಾನ್ ಅವರನ್ನು ಹಿಂದಿಕ್ಕುವ ಅವಕಾಶ ಸೂರ್ಯಕುಮಾರ್ ಮುಂದಿದೆ.

ಅಷ್ಟೇ ಅಲ್ಲದೆ ಟಿ20 ಶ್ರೇಯಾಂಕ ಪಟ್ಟಿಯಲ್ಲೂ ಈ ಪೈಪೋಟಿ ಕಂಡು ಬರಲಿದೆ. ಅಂದರೆ ಪ್ರಸ್ತುತ ಟಿ20 ರ್ಯಾಂಕಿಂಗ್ನಲ್ಲಿ ಮೊಹಮ್ಮದ್ ರಿಜ್ವಾನ್ ನಂಬರ್ 1 ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 2ನೇ ಸ್ಥಾನ ಅಲಂಕರಿಸಿದ್ದಾರೆ.

ಹಾಗಾಗಿ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಉಭಯ ಆಟಗಾರರ ನಡುವೆ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.



















