ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಭಾರತ ತಂಡವು ಇದೀಗ 2ನೇ ಮ್ಯಾಚ್ಗಾಗಿ ಸಜ್ಜಾಗುತ್ತಿದೆ. ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ 2 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಇನಿಂಗ್ಸ್ ಹಾಗೂ 32 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇನ್ನು ಜನವರಿ 3 ರಿಂದ ಶುರುವಾಗಲಿರುವ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಡ್ರಾ ಸಾಧಿಸಿದರೂ ಸರಣಿ ಗೆಲ್ಲಬಹುದು. ಇತ್ತ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕು. ಹೀಗಾಗಿ ಈ ಪಂದ್ಯದಲ್ಲಿ ಭಾರತ ತಂಡವು 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
ಏಕೆಂದರೆ ಮೊದಲ ಪಂದ್ಯದಲ್ಲಿ ಆಡಿದ್ದ ರವಿಚಂದ್ರನ್ ಅಶ್ವಿನ್ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇನ್ನು ಬೆನ್ನು ನೋವಿನ ಕಾರಣ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯದ ರವೀಂದ್ರ ಜಡೇಜಾ ಅಶ್ವಿನ್ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
ಹಾಗೆಯೇ ಮೊದಲ ಮ್ಯಾಚ್ ಮೂಲಕ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಕೂಡ ಆಡುವ ಬಳಗದಿಂದ ಕೈ ಬಿಡುವ ಸಾಧ್ಯತೆಯಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ 20 ಓವರ್ಗಳನ್ನು ಬೌಲಿಂಗ್ ಮಾಡಿದ್ದರೂ ಪ್ರಸಿದ್ಧ್ ಕೃಷ್ಣ ಪಡೆದಿದ್ದು ಕೇವಲ 1 ವಿಕೆಟ್ ಮಾತ್ರ. ಇದೇ ವೇಳೆ 93 ರನ್ಗಳನ್ನು ಬಿಟ್ಟು ಕೊಟ್ಟಿದ್ದರು. ಹೀಗಾಗಿ ಪ್ರಸಿದ್ಧ್ಗೂ ದ್ವಿತೀಯ ಟೆಸ್ಟ್ನಲ್ಲಿ ಸ್ಥಾನ ಸಿಗುವುದು ಅನುಮಾನ.
ಇಲ್ಲಿ ಪ್ರಸಿದ್ಧ್ ಕೃಷ್ಣ ಬದಲಿಗೆ ಮುಕೇಶ್ ಕುಮಾರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗಬಹುದು. ಈ ಎರಡು ಬದಲಾವಣೆಯೊಂದಿಗೆ ಕೇಪ್ಟೌನ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್.
ಇದನ್ನೂ ಓದಿ: Virat Kohli: ಟಾಪ್-4 ಗೆ ವಿರಾಟ್ ಕೊಹ್ಲಿ ಎಂಟ್ರಿ..!
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್.