ಟೀಂ ಇಂಡಿಯಾ (Indian cricket team) ಸೂಪರ್ 12 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಏಕಪಕ್ಷೀಯವಾಗಿ ಸೋಲಿಸಿ ಟಿ20 ವಿಶ್ವಕಪ್ (T20 World Cup 2022) ಸೆಮಿಫೈನಲ್‌ಗೆ ಪ್ರವೇಶಿಸಿದೆ. ರೋಹಿತ್ ಪಡೆ ಈ ಸುತ್ತಿನಲ್ಲಿ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಜಯಗಳಿಸುವ ಮೂಲಕ ಗುಂಪು 2 ರಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಭಾರತದ ಸೆಮಿಫೈನಲ್ ಪಂದ್ಯ ಗುರುವಾರ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ ಆದರೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವುದು ಸುಲಭವಲ್ಲ. ಆಂಗ್ಲರ ಬ್ಯಾಟಿಂಗ್ ಮತ್ತು ಬೌಲಿಂಗ್ ಟೀಂ ಇಂಡಿಯಾಕ್ಕಿಂತ ಕಡಿಮೆಯೇನಿಲ್ಲ, ಇಂತಹ ಪರಿಸ್ಥಿತಿಯಲ್ಲಿ ರೋಚಕ ಪಂದ್ಯ ನಡೆಯುವುದು ಗ್ಯಾರಂಟಿ.
ಅಂದಹಾಗೆ, ಭಾರತಕ್ಕೆ 2022 ರ ಟಿ20 ವಿಶ್ವಕಪ್ ಸೆಮಿಫೈನಲ್ ದುಸ್ವಪ್ನದಂತೆ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಳೆದ ನಾಲ್ಕು ಐಸಿಸಿ ಟ್ರೋಫಿಗಳ ಸೆಮಿಫೈನಲ್‌ನಲ್ಲಿ ಭಾರತ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿರುವುದು. ಐಸಿಸಿ ಟೂರ್ನಮೆಂಟ್‌ಗಳ ಕೊನೆಯ ನಾಲ್ಕು ಸೆಮಿಫೈನಲ್‌ಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ತೂಕ ತೀರ ಕಡಿಮೆ ಇರುವುದು.
ಐಸಿಸಿ ಟೂರ್ನಿಗಳ ಸೆಮಿಫೈನಲ್‌ನಲ್ಲಿ ಭಾರತದ ಸಾಧನೆ
ಕಳೆದ ನಾಲ್ಕು ಐಸಿಸಿ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಭಾರತ ಅಷ್ಟಾಗಿ ಯಶಸ್ವಿಯಾಗಿಲ್ಲ. 2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿತ್ತು. ಆ ಬಳಿಕ 2017 ರ ಚಾಂಪಿಯನ್ಸ್ ಟ್ರೋಫಿಯ ಸೆಮಿ-ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ 2016 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಮುಗ್ಗರಿಸಿತ್ತು. ಹಾಗೆಯೇ 2015 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲೊಪ್ಪಿಕೊಂಡಿತ್ತು.
ಐಸಿಸಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಸಾಧನೆ
ಇದೀಗ ಈ ಟೂರ್ನಿಯ ಅತ್ಯುತ್ತಮ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ತಂಡದ ಮುಂದೆ ಇಂಗ್ಲೆಂಡ್ ಸವಾಲು ಎದುರಾಗಿದೆ. ಇದೀಗ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.