ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ

|

Updated on: Nov 02, 2024 | 8:27 AM

Hong Kong Sixes: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 12 ಸೀಸನ್​ಗಳನ್ನು ಆಡಲಾಗಿದೆ.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
Team India - HK6
Follow us on

ನವೆಂಬರ್ 1 ರಿಂದ ನವೆಂಬರ್ 3 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಕ್ರಿಕೆಟ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಲಿದೆ. ಆದರೆ ಇಲ್ಲಿ ಟೀಮ್ ಇಂಡಿಯಾದ ಸಂಪೂರ್ಣ ಬಳಗ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಈ ಟೂರ್ನಿಯಲ್ಲಿ ಕೇವಲ 6 ಆಟಗಾರರು ಮಾತ್ರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಹಲವು ಹೊಸ ನಿಯಮಗಳಿದ್ದು, ಈ ಪಂದ್ಯಾವಳಿಯು ಟಿ20 ಕ್ರಿಕೆಟ್​ಗಿಂತ ಭಿನ್ನವಾಗಿರಲಿದೆ.

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ನಿಯಮಗಳು:

  • ಒಂದು ತಂಡದ ಆಡುವ ಬಳಗದಲ್ಲಿ ಕೇವಲ 6 ಆಟಗಾರರಿಗೆ ಮಾತ್ರ ಅವಕಾಶ.
  • ಪ್ರತಿ ಪಂದ್ಯದ ಇನಿಂಗ್ಸ್​ವೊಂದರಲ್ಲಿ 6 ಓವರ್​ಗಳನ್ನು ಆಡಲಾಗುತ್ತದೆ.
  • ಪ್ರತಿ ಓವರ್​ನಲ್ಲಿ 6 ಎಸೆತಗಳು ಇರಲಿದೆ. ಫೈನಲ್ ಪಂದ್ಯಗಳಲ್ಲಿ ಒಂದು ಓವರ್​ಗೆ 8 ಬಾಲ್​ ಇರಲಿದೆ.
  • ವೈಡ್ ಮತ್ತು ನೋಬಾಲ್​ಗೆ 2 ರನ್​ಗಳನ್ನು ನೀಡಲಾಗುತ್ತದೆ.
  • ವಿಕೆಟ್-ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಸದಸ್ಯರು ಬೌಲಿಂಗ್ ಮಾಡಬೇಕು.
  • ನಿಗದಿತ 6 ಓವರ್‌ಗಳು ಮುಗಿಯುವ ಮುನ್ನ 5 ವಿಕೆಟ್‌ಗಳು ಪತನವಾದರೆ, ಕೊನೆಯ ಬ್ಯಾಟರ್ ಸಿಂಗಲ್ ಆಗಿ ಬ್ಯಾಟಿಂಗ್ ಮಾಡಬಹುದು.
  • ಸಿಂಗಲ್ ಬ್ಯಾಟ್ಸ್​ಮನ್​ ಜೊತೆ ಮತ್ತೋರ್ವ ಆಟಗಾರ ರನ್ನರ್ ಆಗಿ ನಾನ್​ ಸ್ಟ್ರೈಕ್​ನಲ್ಲಿರಬೇಕು. ಆದರೆ ಆತನಿಗೆ ಬ್ಯಾಟಿಂಗ್ ಅವಕಾಶವಿರುವುದಿಲ್ಲ.
  • ಬ್ಯಾಟ್ಸ್‌ಮನ್‌ 50ರನ್​ಗಳಿಸಿದರೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಬೇಕು. ಇದಾದ ಬಳಿಕ ಇತರೆ ಬ್ಯಾಟ್ಸ್‌ಮನ್‌ಗಳು ಔಟಾದರೆ, ನಿವೃತ್ತರಾದ ಬ್ಯಾಟರ್​ ಮತ್ತೆ ಬ್ಯಾಟಿಂಗ್ ಮಾಡಬಹುದು.

ಕಣಕ್ಕಿಳಿಯುವ ತಂಡಗಳಾವುವು?

  • ಭಾರತ
  • ಪಾಕಿಸ್ತಾನ್
  • ಆಸ್ಟ್ರೇಲಿಯಾ
  • ಬಾಂಗ್ಲಾದೇಶ್
  • ಹಾಂಗ್​ ಕಾಂಗ್
  • ಇಂಗ್ಲೆಂಡ್
  • ನೇಪಾಳ
  • ನ್ಯೂಝಿಲೆಂಡ್
  • ಒಮಾನ್
  • ಸೌತ್ ಆಫ್ರಿಕಾ
  • ಶ್ರೀಲಂಕಾ
  • ಯುಎಇ

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸ್ವರೂಪವೇನು?

ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ. ದ್ವಿತೀಯ ಸುತ್ತಿನಲ್ಲಿ ಸೆಮಿಫೈನಲ್ ಇರಲಿದ್ದು, ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.

ಈ ಪಂದ್ಯಾವಳಿ ಶುರುವಾಗಿದ್ದು ಯಾವಾಗ?

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಿಕ್ಸರ್​ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ

ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 12 ಸೀಸನ್​ಗಳನ್ನು ಆಡಲಾಗಿದೆ. ಆದರೆ 2012 ರಲ್ಲಿ ಮತ್ತೆ ನಿಂತು ಹೋದ ಟೂರ್ನಿಯನ್ನು 2017 ರಲ್ಲಿ ಮತ್ತೆ ಆಯೋಜಿಸಲಾಗಿತ್ತು. ಅದುವೇ ಕೊನೆ, ಇದಾದ ಬಳಿಕ ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿ ನಡೆದಿರಲಿಲ್ಲ. ಇದೀಗ 7 ವರ್ಷಗಳ ಬಳಿಕ ಮತ್ತೆ ಆರು ಆಟಗಾರರ ಪಂದ್ಯಾವಳಿಯನ್ನು ಆಯೋಜಿಸಲು ಹಾಂಗ್ ಕಾಂಗ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಆಡಿರುವ ಟೀಮ್ ಇಂಡಿಯಾದ ಆಟಗಾರರು:

  • ಸಚಿನ್ ತೆಂಡೂಲ್ಕರ್
  • ಎಂಎಸ್ ಧೋನಿ
  • ಅನಿಲ್ ಕುಂಬ್ಳೆ
  • ಸಂಜಯ್ ಬಂಗಾರ್
  • ಸುನಿಲ್ ಜೋಷಿ
  • ನಿಖಿಲ್ ಚೋಪ್ರಾ
  • ರಿತೇಂದ್ರ ಸೋಧಿ
  • ಹೃಷಿಕೇಶ್ ಕಾನಿಟ್ಕರ್.

2024ರ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಯಾವಾಗ ಶುರು?

ನವೆಂಬರ್ 1 ರಿಂದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು ಶುರುವಾಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 3 ರಂದು ಜರುಗಲಿದೆ. ಈ ಎಲ್ಲಾ ಪಂದ್ಯಗಳಿಗೆ ಹಾಂಗ್​ ಕಾಂಗ್​ನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

 

Published On - 8:05 am, Tue, 8 October 24