ಭಾರತ ತಂಡಕ್ಕೆ ಭುವನೇಶ್ವರ್ ನಾಯಕ; ಕೃನಾಲ್ ಪಾಂಡ್ಯಗೂ ತಂಡದಲ್ಲಿ ಅವಕಾಶ
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭುವನೇಶ್ವರ್ ಕುಮಾರ್ ನಾಯಕತ್ವದಲ್ಲಿ ಕೃನಾಲ್ ಪಾಂಡ್ಯ, ನಿತೀಶ್ ರಾಣಾ ಸೇರಿದಂತೆ ಅನುಭವಿ ಆಟಗಾರರ ತಂಡ ಕಣಕ್ಕಿಳಿಯಲಿದೆ. ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯುವ ಈ ಪಂದ್ಯಾವಳಿಯಲ್ಲಿ 12 ಅಂತರರಾಷ್ಟ್ರೀಯ ತಂಡಗಳು ಭಾಗವಹಿಸುತ್ತಿವೆ. ಭಾರತ 2005 ರಲ್ಲಿ ಚಾಂಪಿಯನ್ ಆಗಿತ್ತು. ಪಂದ್ಯಾವಳಿಯ ವಿಶೇಷ ನಿಯಮಗಳು ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿವೆ.

ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕತ್ವ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ಗೆ ವಹಿಸಲಾಗಿದೆ. ಇವರಲ್ಲದೆ ಈ ತಂಡದಲ್ಲಿ ಕ್ರುನಾಲ್ ಪಾಂಡ್ಯ, ನಿತೀಶ್ ರಾಣಾ, ಶಶಾಂಕ್ ಸಿಂಗ್, ಟಿ ನಟರಾಜನ್, ರಾಹುಲ್ ಟೆವಾಟಿಯಾ ಮತ್ತು ರಾಹುಲ್ ತ್ರಿಪಾಠಿ ಅವರಿಗೂ ಅವಕಾಶ ನೀಡಲಾಗಿದೆ. ಈ ಟೂರ್ನಮೆಂಟ್‌ನ ಪಂದ್ಯಗಳು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಶನ್ ಗ್ರೌಂಡ್ ಮತ್ತು ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆಯಲಿದ್ದು, ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ತಂಡಗಳನ್ನು ಒಳಗೊಂಡ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ನಲ್ಲಿ ಒಟ್ಟು 12 ಅಂತರರಾಷ್ಟ್ರೀಯ ತಂಡಗಳು ಭಾಗವಹಿಸಲಿವೆ. ಮೊದಲ ಪಂದ್ಯವು ಅಕ್ಟೋಬರ್ 30 ರಂದು ಆಸ್ಟ್ರೇಲಿಯಾ ಮತ್ತು ಹಾಂಗ್ ಕಾಂಗ್ ನಡುವೆ ನಡೆಯಲಿದೆ.
ಭುವಿಗೆ ತಂಡದ ನಾಯಕತ್ವ
ಇನ್ನು ಈ ಟೂರ್ನಮೆಂಟ್ಗೆ ಭಾರತ ತಂಡದಲ್ಲಿ ಆಯ್ಕೆಯಾಗಿರುವವರಲ್ಲಿ ಶಶಾಂಕ್ ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಭಾರತಕ್ಕಾಗಿ ಆಡಿದ್ದಾರೆ. ಭುವನೇಶ್ವರ್ ಅವರಿಗೆ ವರ್ಷಗಳ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಅನುಭವವಿದೆ. ಕೃನಾಲ್ ಪಾಂಡ್ಯ ಸಮರ್ಥ ಆಲ್ ರೌಂಡರ್ ಆಗಿದ್ದು, ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಆಕ್ರಮಣಕಾರಿ ಟಾಪ್-ಆರ್ಡರ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಶಶಾಂಕ್ ಸಿಂಗ್ ಮತ್ತು ರಾಹುಲ್ ತೆವಾಟಿಯಾ ಉತ್ತಮ ಫಿನಿಷರ್‌ಗಳಾಗಿದ್ದು, ನಟರಾಜನ್ ಅವರ ವೇಗದ ಬೌಲಿಂಗ್ ಕೂಡ ತಂಡಕ್ಕೆ ನೆರವಾಗಲಿದೆ.
6 ಆಟಗಾರರು, 6 ಓವರ್‌ಗಳು
ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ, ಪ್ರತಿ ತಂಡವು ಕೇವಲ 6 ಆಟಗಾರರನ್ನು ಹೊಂದಿರುತ್ತದೆ. ಪ್ರತಿ ಇನ್ನಿಂಗ್ಸ್‌ನಲ್ಲಿ ಕೇವಲ 6 ಓವರ್‌ಗಳು ಮಾತ್ರ ಇರುತ್ತವೆ. ವಿಕೆಟ್ ಕೀಪರ್ ಹೊರತುಪಡಿಸಿ, ಇತರ 5 ಆಟಗಾರರು ಬೌಲಿಂಗ್ ಮಾಡುತ್ತಾರೆ. ಇದರಲ್ಲಿ, ಒಬ್ಬ ಆಟಗಾರ 2 ಓವರ್‌ಗಳು ಬೌಲಿಂಗ್ ಮಾಡಬಹುದು. ಆದರೆ ಸತತವಾಗಿ ಎರಡು ಓವರ್‌ಗಳು ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಉಳಿದ ನಾಲ್ವರು ಆಟಗಾರರು ತಲಾ 1 ಓವರ್ ಬೌಲಿಂಗ್ ಮಾಡುತ್ತಾರೆ. ಒಬ್ಬ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಿದರೆ, ಅವನು ಆಟದಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟ್ ಆದರೆ ಅಥವಾ ನಿವೃತ್ತರಾದರೆ ಮಾತ್ರ ಆತ ಮತ್ತೆ ಬ್ಯಾಟಿಂಗ್ಗೆ ಬರಬಹುದು. ಅಲ್ಲದೆ ತಂಡದ 5 ವಿಕೆಟ್‌ಗಳು ಪತನವಾದ ಬಳಿಕ ಕೊನೆಯ ಬ್ಯಾಟ್ಸ್‌ಮನ್ ಒಬ್ಬಂಟಿಯಾಗಿ ಆಡುವುದನ್ನು ಮುಂದುವರಿಸುತ್ತಾನೆ.
ಭಾರತ ಒಮ್ಮೆ ಚಾಂಪಿಯನ್
ಈ ಪಂದ್ಯಾವಳಿಯಲ್ಲಿ, ವೈಡ್ ಅಥವಾ ನೋ-ಬಾಲ್‌ಗೆ ಹೆಚ್ಚುವರಿ ರನ್ ನೀಡಲಾಗುತ್ತದೆ ಮತ್ತು ನೋ-ಬಾಲ್‌ಗೆ ಫ್ರೀ ಹಿಟ್ ಇರುವುದಿಲ್ಲ. ಪಂದ್ಯವು 45 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ. 2024 ರಿಂದ, ಪಂದ್ಯಾವಳಿಯಲ್ಲಿ 12 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದು ಗುಂಪಿನಲ್ಲೂ ತಲಾ ಮೂರು ತಂಡಗಳಿರುತ್ತವೆ. ತಂಡಗಳು ತಮ್ಮ ಗುಂಪಿನೊಳಗೆ ಪರಸ್ಪರ ವಿರುದ್ಧ ಒಂದು ಪಂದ್ಯವನ್ನು ಆಡುತ್ತವೆ. ಆ ನಂತರ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಸುತ್ತಿಗೆ ಮುನ್ನಡೆಯುತ್ತವೆ. ಇನ್ನು ಭಾರತ ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಒಮ್ಮೆ ಮಾತ್ರ ಚಾಂಪಿಯನ್ ಆಗಿದ್ದು, 2005 ರ ಆವೃತ್ತಿಯಲ್ಲಿ ರಾಬಿನ್ ಸಿಂಗ್ ನಾಯಕತ್ವದಲ್ಲಿ ತಂಡ ಟ್ರೋಫಿ ಎತ್ತಿಹಿಡಿದಿತ್ತು. ಇದಲ್ಲದೆ, ಭಾರತ 1992 ಮತ್ತು 1996 ರಲ್ಲಿ ಫೈನಲ್ ತಲುಪಿತ್ತಾದರೂ ಚಾಂಪಿಯನ್ ಆಗುವಲ್ಲಿ ವಿಫಲವಾಗಿತ್ತು.
ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್
ಹಾಂಗ್ ಕಾಂಗ್ ಸಿಕ್ಸಸ್‌ಗಾಗಿ ಭಾರತ ತಂಡ: ಭುವನೇಶ್ವರ್ ಕುಮಾರ್ (ನಾಯಕ), ಕೃನಾಲ್ ಪಾಂಡ್ಯ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಮತ್ತು ಟಿ. ನಟರಾಜನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Mon, 5 October 26




