
ಪ್ರಸ್ತುತ ಭಾರತದಲ್ಲಿ 17ನೇ ಆವೃತ್ತಿಯ ಐಪಿಎಲ್ (IPL 2024) ಜ್ವರ ಜೋರಾಗಿದೆ. ಈಗಾಗಲೇ ಟೂರ್ನಿಯ ಅರ್ಧಪಯಣ ಮುಗಿದಿದೆ. ಉಳಿದರ್ಧದ ಪಯಣ ಕೂಡ ಬಹಳ ರೋಚಕತೆ ಸೃಷ್ಟಿಸುವುದು ಖಚಿತ. ಈ ನಡುವೆ 2024 ರ ಟಿ20 ವಿಶ್ವಕಪ್ (T20 World Cup 2024) ಬಗ್ಗೆಯೂ ಚರ್ಚೆ ಶುರುವಾಗಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದೆ. ಈ ಚುಟುಕು ಸಮರಕ್ಕಾಗಿ ಟೀಂ ಇಂಡಿಯಾವನ್ನು (Team India) ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದ ಆಯ್ಕೆಯು ಏಪ್ರಿಲ್ 27 ಅಥವಾ 28 ರಂದು ನಡೆಯಲಿದೆ. ಈ ಎರಡು ದಿನಾಂಕಗಳ ಪೈಕಿ ಒಂದರಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಭಾರತದ ಆಯ್ಕೆಗಾರರು ಕುಳಿತು ಟೀಂ ಇಂಡಿಯಾವನ್ನು ಆಯ್ಕೆ ಮಾಡುತ್ತಾರೆ ಎಂಬ ಸುದ್ದಿ ಇದೆ.
ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಮೇ 1 ಕೊನೆಯ ಗಡುವಾಗಿರುವುದರಿಂದ ಎಲ್ಲಾ ತಂಡಗಳು ಇದರೊಳಗೆ ತಂಡವನ್ನು ಪ್ರಕಟಿಸಬೇಕಾಗಿದೆ. ಅದರಂತೆ ಟೀಮ್ ಇಂಡಿಯಾ ಕೂಡ ಏಪ್ರಿಲ್ 27 ಅಥವಾ ಏಪ್ರಿಲ್ 28 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಏಕೆಂದರೆ ಆ ದಿನಾಂಕದಂದು ನಾಯಕ ರೋಹಿತ್ ಶರ್ಮಾ ಕೂಡ ದೆಹಲಿಯಲ್ಲಿರುತ್ತಾರೆ. ಐಪಿಎಲ್ 2024 ರ ವೇಳಾಪಟ್ಟಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಪಂದ್ಯವು ಏಪ್ರಿಲ್ 27 ರಂದು ದೆಹಲಿಯಲ್ಲಿ ನಡೆಯಲ್ಲಿದೆ. ಹೀಗಾಗಿ ಅಂದೇ ರೋಹಿತ್, ಆಯ್ಕೆಗಾರರೊಂದಿಗೆ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಈ ಆಯ್ಕೆ ಸಭೆಗಾಗಿ ಸ್ಪೇನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಏಪ್ರಿಲ್ 30 ರಂದು ಲಕ್ನೋ ಸೂಪರ್ ಜೈಂಟ್ಸ್ ಜೊತೆ ಮುಂಬೈ ಇಂಡಿಯನ್ಸ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 27 ಅಥವಾ 28 ರ ದಿನಾಂಕವನ್ನು ತಂಡದ ಆಯ್ಕೆಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಅವಧಿಯಲ್ಲಿ ಆಯ್ಕೆಗಾರರ ಜೊತೆಗೆ ತಂಡದ ನಾಯಕ ರೋಹಿತ್ ಕೂಡ ದೆಹಲಿಯಲ್ಲಿರುತ್ತಾರೆ.
ಈಗ ಪ್ರಶ್ನೆ ಏನೆಂದರೆ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಯಾವ ಆಟಗಾರರನ್ನು ಆಯ್ಕೆ ಮಾಡಬಹುದು? ಎಂಬುದು. ಆದರೆ ಈಗಾಗಲೇ ಕನಿಷ್ಠ 10 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ 10 ಆಟಗಾರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಕುಲ್ದೀಪ್ ಯಾದನ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹೆಸರುಗಳಿವೆ.
ಆದರೆ ಈ ಹೆಸರುಗಳ ನಡುವೆ ಹಾರ್ದಿಕ್ ಪಾಂಡ್ಯ ಹೆಸರನ್ನು ಸೇರಿಸಲಾಗಿಲ್ಲ. ಏಕೆಂದರೆ ಅವರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಹಾರ್ದಿಕ್ ಐಪಿಎಲ್‌ನಲ್ಲಿ ಬೌಲಿಂಗ್ ಮಾಡಿದರೆ ಮಾತ್ರ ಅವರನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Sat, 20 April 24