
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 19 ವರ್ಷದೊಳಗಿನವರ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಸತತ ಮೂರನೇ ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕದಿಂದ ವಂಚಿತರಾಗಿದ್ದ ವೈಭವ್ ಇದೀಗ ಮೂರನೇ ಪಂದ್ಯದಲ್ಲಿ ಶತಕ ವಂಚಿತರಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದಾಗ್ಯೂ ವೈಭವ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೇವಲ 20 ಎಸೆತಗಳಲ್ಲಿ ಬಿರುಗಾಳಿಯ ಅರ್ಧಶತಕ ಬಾರಿಸಿದರು. ಅಲ್ಲದೆ ತಮ್ಮ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್, 6 ಬೌಂಡರಿಗಳನ್ನು ಸಹ ಬಾರಿಸಿದರು.
ಜುಲೈ 2 ರ ಬುಧವಾರ ಇಂಗ್ಲೆಂಡ್‌ನ ನಾರ್ಥಾಂಪ್ಟನ್‌ನಲ್ಲಿ ಉಭಯ ತಂಡಗಳ ನಡುವೆ ಯುವ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯಿತು. ಮಳೆಯಿಂದಾಗಿ ತಲಾ 40 ಓವರ್ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡ ನಾಯಕ ಥಾಮಸ್ ರ್ಯು ಅವರ ಸ್ಫೋಟಕ ಇನ್ನಿಂಗ್ಸ್‌ನ ಆಧಾರದ ಮೇಲೆ 6 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು. ಥಾಮಸ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 76 ರನ್ ಕಲೆಹಾಕಿದರು. ಅವರ ಜೊತೆಗೆ, ಆರಂಭಿಕ ಬಿಜೆ ಡಾಕಿನ್ಸ್ ಕೂಡ 61 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಕನಿಷ್ಕ್ ಚೌಹಾಣ್ ಗರಿಷ್ಠ 3 ವಿಕೆಟ್‌ಗಳನ್ನು ಪಡೆದರು.
ಗುರಿ ದೊಡ್ಡದಿದ್ದರಿಂದ ಭಾರತಕ್ಕೆ ವೇಗದ ಆರಂಭದ ಅಗತ್ಯವಿತ್ತು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಯುವ ಆರಂಭಿಕ ವೈಭವ್ ಸೂರ್ಯವಂಶಿ ಬಂದ ತಕ್ಷಣ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಲು ಪ್ರಾರಂಭಿಸಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 45 ಮತ್ತು 48 ರನ್ ಗಳಿಸಿ ಔಟಾಗಿದ್ದ ವೈಭವ್ ಈ ಪಂದ್ಯದಲ್ಲಿ ಅರ್ಧಶತಕ ದಾಟುವಲ್ಲಿ ಯಶಸ್ವಿಯಾದರು.
IND vs ENG: ಸತತ 2ನೇ ಪಂದ್ಯದಲ್ಲೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ
ಕೇವಲ 20 ಎಸೆತಗಳಲ್ಲಿ ತಮ್ಮ ಬಿರುಗಾಳಿಯ ಅರ್ಧಶತಕವನ್ನು ಪೂರೈಸಿದ 14 ವರ್ಷದ ವೈಭವ್ ಈ ವೇಳೆಗಾಗಲೇ 4 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಅರ್ಧಶತಕವನ್ನು ಪೂರೈಸಿದ ವೈಭವ್, ಈ ಓವರ್‌ನಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿಯನ್ನು ಬಾರಿಸಿದರು. ಎಂಟನೇ ಓವರ್‌ನಲ್ಲಿಯೂ ಬೌಂಡರಿಗಳ ಮಳೆಗರೆದ ವೈಭವ್ ಈ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಆದರೆ ತಮ್ಮ ಶತಕದ ಸಮೀಪದಲ್ಲಿ ಎಡವಿದ ವೈಭವ್, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಕ್ಯಾಚ್ ನೀಡಿ ಔಟ್ ಆದರು. ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 31 ಎಸೆತಗಳನ್ನು ಎದುರಿಸಿದ ವೈಭವ್, 9 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 86 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿ ಕೇವಲ 14 ರನ್‌ಗಳಿಂದ ಶತಕ ವಂಚಿತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ