IND vs ENG: ಶತಕ ವಂಚಿತರಾದರೂ ರೋಹಿತ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
Yashasvi Jaiswal: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 87 ರನ್ ಗಳಿಸಿ ಔಟಾದರು. ಶತಕದಿಂದ ವಂಚಿತರಾದರೂ, SENA ದೇಶಗಳಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ಹೊಂದಿರುವ ಭಾರತೀಯ ಆರಂಭಿಕ ಆಟಗಾರ ಎಂಬ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಕೇವಲ 17 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.

ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಸತತ 2ನೇ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಪಂದ್ಯದ ಆರಂಭದಿಂದಲೂ ಸ್ಥಿರವಾಗಿ ಬ್ಯಾಟ್ ಬೀಸಿದ್ದ ಜೈಸ್ವಾಲ್ ಆಂಗ್ಲ ಆಟಗಾರರಿಗೆ ಒಂದೇ ಒಂದು ಅವಕಾಶವನ್ನು ನೀಡಿರಲಿಲ್ಲ. ಆದರೆ ಶತಕದಂಚಿನಲ್ಲಿ ಎಡವಿದ ಜೈಸ್ವಾಲ್ 87 ರನ್ ಬಾರಿಸಿ, ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ಆದಾಗ್ಯೂ ಜೈಸ್ವಾಲ್ ತಮ್ಮ ಈ ಇನ್ನಿಂಗ್ಸ್ ಮೂಲಕ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ ಬಹುಬೇಗನೆ ಔಟಾದರು ದೃತಿಗೆಡದ ಜೈಸ್ವಾಲ್ ತಮ್ಮ ನೈಜ ಆಟವನ್ನು ಮುಂದುವರೆಸಿದರು. ಹೀಗಾಗಿ ಕೇವಲ 59 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಅರ್ಧಶತಕವನ್ನು ಸಹ ಪೂರ್ಣಗೊಳಿಸಿದರು. ಆದರೆ ಜೈಸ್ವಾಲ್ ಶತಕ ಗಳಿಸುವ ಸನಿಹದಲ್ಲಿದ್ದಾಗ, ಇಂಗ್ಲಿಷ್ ನಾಯಕ ಬೆನ್ ಸ್ಟೋಕ್ಸ್ ಎಸೆದ 46 ನೇ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.
SENA ದೇಶಗಳಲ್ಲಿ ಜೈಸ್ವಾಲ್ ಸಾಧನೆ
ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಜೈಸ್ವಾಲ್, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು ಬಾರಿ 50+ ಬಾರಿಸಿದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. SENA ದೇಶಗಳಲ್ಲಿ ಜೈಸ್ವಾಲ್ ಭಾರತೀಯ ಆರಂಭಿಕ ಆಟಗಾರನಾಗಿ ಐದು ಬಾರಿ 50+ ಸ್ಕೋರ್ ದಾಖಲಿಸಿದ್ದಾರೆ. ಈ ಮೂಲಕ SENA ದೇಶಗಳಲ್ಲಿ ಆರಂಭಿಕ ಆಟಗಾರನಾಗಿ ನಾಲ್ಕು ಬಾರಿ 50+ ಸ್ಕೋರ್ ಬಾರಿಸಿದ್ದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ವಿಶೇಷವೆಂದರೆ ರೋಹಿತ್ ಶರ್ಮಾ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಯಶಸ್ವಿ ಜೈಸ್ವಾಲ್ ಕೇವಲ 17 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
IND vs ENG: ಮೊದಲ ಟೆಸ್ಟ್‌ನಲ್ಲಿ 4 ಕ್ಯಾಚ್ ಕೈಚೆಲ್ಲಿದ ಯಶಸ್ವಿ ಜೈಸ್ವಾಲ್ಗೆ ಬಿಗ್ ರಿಲೀಫ್
ಇದೂ ಕೂಡ ದಾಖಲೆ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ 7 ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿರುವ ಜೈಸ್ವಾಲ್, ದಂತಕಥೆಯ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ 20 ಬಾರಿ ಈ ಸಾಧನೆ ಮಾಡಿದ್ದರೆ, ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 8 ಬಾರಿ ಈ ಸಾಧನೆ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ