India vs England U19 World Cup: ದಾಖಲೆಯ 5ನೇ ಬಾರಿ ಅಂಡರ್19 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ: ಇಂಗ್ಲೆಂಡ್ ವಿರುದ್ಧ ಗೆಲುವು

India won a record-extending fifth U-19 World Cup title: ಶನಿವಾರ ರಾತ್ರಿ ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಭಾರತ ಅಂಡರ್ – 19 ತಂಡ ದಾಖಲೆಯ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

India vs England U19 World Cup: ದಾಖಲೆಯ 5ನೇ ಬಾರಿ ಅಂಡರ್19 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ: ಇಂಗ್ಲೆಂಡ್ ವಿರುದ್ಧ ಗೆಲುವು
India Under19 Team
TV9kannada Web Team

| Edited By: Vinay Bhat

Feb 06, 2022 | 7:28 AM

ಐಸಿಸಿ ಅಂಡರ್ – 19 ವಿಶ್ವಕಪ್​ನಲ್ಲಿ (ICC Under 19 World Cup 2022) ಭಾರತದ ಪಾರುಪತ್ಯ ಮುಂದುವರೆದಿದೆ. ಶನಿವಾರ ರಾತ್ರಿ ನಡೆದ ಅಂತಿಮ ಫೈನಲ್ ಕಾದಾಟದಲ್ಲಿ ಇಂಗ್ಲೆಂಡ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಭಾರತ ಅಂಡರ್ – 19 ತಂಡ (England U19 vs India U19) ದಾಖಲೆಯ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಜ್ ಬಾವ ಅವರ ಬೆಂಕಿಯ ಬೌಲಿಂಗ್​ಗೆ ಪೆವಿಲಿಯನ್ ಸೇರಿಕೊಂಡ ಯುವ ಆಂಗ್ಲ ಪಡೆ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡರೆ, ಭಾರತ ಈ ಟಾರ್ಗೆಟ್ ಅನ್ನು ಎಚ್ಚರಿಕೆಯಿಂದ ಗುರಿ ಮುಟ್ಟಿ ಹೊಸ ದಾಖಲೆ ಬರೆಯಿತು. ಈ ಮೂಲಕ 2000, 2008, 2012, 2018 ಬಳಿಕ ಇದೀಗ 2022ರ ಕಿರಿಯರ ವಿಶ್ವಕಪ್​ನಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ. ಯಶ್ ಧುಲ್ (Yash Dhull) ಪಡೆಯ ಈ ಸಾಹಸಕ್ಕೆ ಇಡೀ ಕ್ರಿಕೆಟ್ ಜಗತ್ತೇ ಶುಭಕೋರುತ್ತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ನೆಲ ಕಚ್ಚಿ ನಿಂತು ತಂಡಕ್ಕೆ ಆಸರೆಯಾದ ಜೇಮ್ಸ್ ರೋ 12 ಬೌಂಡರಿ ಸಹಿತ 95 ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು. ಉಳಿದಂತೆ ಜಾರ್ಜ್ ಥಾಮಸ್ 27 ಮತ್ತು ಜೇಮ್ಸ್ ಸೇಲ್ಸ್ 34 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್‌ಗಳು ಪರಿಣಾಮಕಾರಿಯಾಗಲಿಲ್ಲ. 44.5 ಓವರ್​ನಲ್ಲಿ 189 ರನ್​ಗೆ ಆಂಗ್ಲರು ಆಲೌಟ್ ಆದರು.

ಭಾರತದ ಪರ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ ರಾಜ್ ಬಾವ 9.5 ಓವರ್‌ಗಳಲ್ಲಿ 31 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಕಾಡಿದರು. ರಾಜ್‌ಗೆ ಉತ್ತಮ ಸಾಥ್ ನೀಡಿದ ರವಿಕುಮಾರ್ 34 ರನ್ ನೀಡಿ 4 ವಿಕೆಟ್ ಉರುಳಿಸಿದರು.

ಇಂಗ್ಲೆಂಡ್ ತಂಡ ನೀಡಿದ 190 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರೆಯಲಿಲ್ಲ. ಭಾರತ ತಂಡದ ಆರಂಭಿಕ ಆಟಗಾರನಾದ ಅಂಗ್ಕ್ರಿಷ್ ರಘುವಂಶಿ ಶೂನ್ಯಕ್ಕೆ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ 21 ರನ್ ಗಳಿಸಿದರು.

ಹೀಗೆ ಬಹು ಬೇಗನೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಟೀಮ್ ಇಂಡಿಯಾಗೆ ಆಸರೆಯಾದದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೇಖ್ ರಶೀದ್. ಹೌದು, ಸೆಮಿ ಫೈನಲ್​ನಂತೆ ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆಸರೆಯಾದ ಶೇಖ್ ರಶೀದ್ 84 ಎಸೆತಗಳಲ್ಲಿ 50 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಯಶ್ ಧುಲ್ 17 ರನ್, ರಾಜ್ ಬವಾ 35 ರನ್, ಕೌಶಲ್ ತಾಂಬೆ 1 ರನ್, ನಿಶಾಂತಂ ಸಿಂಧು ಅಜೇಯ 50 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಬನ 5 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿದರು.

ಅಂತಿಮವಾಗಿ ಭಾರತ ಅಂಡರ್ 19 ತಂಡ 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ 4 ವಿಕೆಟ್‍ಗಳ ಜಯವನ್ನು ಸಾಧಿಸಿ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ವಿಶೇಷ ಸಾಧನೆ ಗೈದಿದೆ. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಾಜ್ ಬಾವ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಟೂರ್ನಿಯುದ್ದಕ್ಕೂ ಭರ್ಜರಿ ಆಟವಾಡಿದ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್ ಬ್ರೇವಿಸ್ ಸರಣಿಶ್ರೇಷ್ಠ ತಮ್ಮದಾಗಿಸಿದರು.

IND vs WI Series: ಕೊನೇ ಕ್ಷಣದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಸ್ಪೋಟಕ ಬ್ಯಾಟರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada