ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ಸರಣಿ ನಿರ್ಣಾಯಕ ಟಿ20 ಪಂದ್ಯ ನಾಳೆ ಹೈದರಾಬಾದ್‌ನಲ್ಲಿ ನಡೆಯಲಿದೆ. ನಾಳೆ ರಾತ್ರಿ ಏಳು ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಟೀಂ ಇಂಡಿಯಾ (Team India) ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಟಿಕೆಟ್ ವಿತರಣೆ ವಿಚಾರದಲ್ಲಿ ಗೊಂದಲ ಉಂಟುಮಾಡಿದ್ದ ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ಇನ್ನೂ ಸಹ ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿರ್ಣಾಯಕ ಪಂದ್ಯಕ್ಕೆ ಮೈದಾನದಲ್ಲಿ ಸಕಲ ವ್ಯವಸ್ಥೆ ಮಾಡುವಲ್ಲಿ ಎಚ್‌ಸಿಎ ನಿರ್ಲಕ್ಷ್ಯ ವಹಿಸಿದ್ದು, ಕ್ರೀಡಾಂಗಣದ ಮೇಲ್ಚಾವಣೆಗೆ ಹಾಕಬೇಕಿದ್ದ ಹೊದಿಕೆಗಳನ್ನು ಇನ್ನೂ ಸಹ ಹಾಕಿಲ್ಲ. ಈಗಾಗಲೇ ಟಿಕೆಟ್ ಮಾರಾಟದಲ್ಲಿ ಭಾರೀ ಟೀಕೆಗೆ ಗುರಿಯಾಗಿರುವ ಎಚ್‌ಸಿಎ ಪಂದ್ಯವನ್ನು ಸರಿಯಾಗಿ ಆಯೋಜಿಸುತ್ತದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಶುರುವಾಗಿದೆ.
ನಿರ್ಣಾಯಕ ಹೋರಾಟಕ್ಕೆ ಬಿಗಿ ಭದ್ರತೆ..
ಉಪ್ಪಳ ಪಂದ್ಯಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, 2500 ಪೊಲೀಸರು ಭದ್ರತೆ ಒದಗಿಸುತ್ತಿದ್ದಾರೆ. ಕಣ್ಗಾವಲುಗಾಗಿ 300 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗಿದೆ. ಇವುಗಳನ್ನು ಕಮಾಂಡ್ ಕಂಟ್ರೋಲ್ ರೂಂ ಕೇಂದ್ರಕ್ಕೆ ಸಂಪರ್ಕಿಸಲಾಗಿದೆ.
ಇಂದು ಹೈದರಾಬಾದ್ ತಲುಪಲಿರುವ ಆಟಗಾರರು..
ನಾಳಿನ ಪಂದ್ಯದಲ್ಲಿ ಆಡಲು ಉಭಯ ತಂಡಗಳ ಆಟಗಾರರು ಶನಿವಾರ ಮಧ್ಯಾಹ್ನ ಹೈದರಾಬಾದ್ ತಲುಪಲಿದ್ದಾರೆ. ಹೀಗಾಗಿ ಹಿಂದಿನ ಅನುಭವಗಳ ಆಧಾರದ ಮೇಲೆ ಪೊಲೀಸರು ವಿಮಾನ ನಿಲ್ದಾಣದಿಂದ ಆಟಗಾರರು ಕ್ರೀಡಾಂಗಣಕ್ಕೆ ತಲುಪುವವರೆಗೆ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.
ಸರಣಿ ನಿರ್ಣಾಯಕ ಪಂದ್ಯ..
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ನಾಳೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋತಿತ್ತು. ನಾಗ್ಪುರದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಸೇನೆ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಮಳೆ ಪೀಡಿತ ಈ ಪಂದ್ಯವನ್ನು 8 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 91 ರನ್‌ಗಳ ಗುರಿಯನ್ನು ನೀಡಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತ್ತು. ಭಾರತದಲ್ಲಿ ನಾಯಕ ರೋಹಿತ್ ಶರ್ಮಾ 46 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೊನೆಯಲ್ಲಿ ಬಂದ ಕಾರ್ತಿಕ್ 2 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ತಂಡಕ್ಕೆ ಜಯತಂದುಕೊಟ್ಟರು. ಇದರೊಂದಿಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಸರಣಿ ನಿರ್ಧರಿಸಲು ಉಭಯ ತಂಡಗಳು ಸಜ್ಜಾಗಿವೆ.
ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್.
ಆಸ್ಟ್ರೇಲಿಯಾ ಸಂಭಾವ್ಯ ಆಟಗಾರರ XI: ಆರನ್ ಫಿಂಚ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.