Pak Vs Eng: 8 ಬೌಂಡರಿ, 5 ಸಿಕ್ಸರ್, 81 ರನ್..! 23ರ ಹರೆಯದ ಬ್ಯಾಟರ್ ಅಬ್ಬರಕ್ಕೆ ತತ್ತರಿಸಿದ ಬಾಬರ್ ಸೇನೆ
Harry Brook: ಬ್ರೂಕ್ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ಬಾರಿಸಿ ತಮ್ಮ T20 ಇಂಟರ್‌ನ್ಯಾಶನಲ್‌ನಲ್ಲಿ ಚೊಚ್ಚಲ ಅರ್ಧಶತಕವನ್ನು ಪೂರೈಸಿದಿರು.
ಪ್ರಸ್ತುತ ಪಾಕಿಸ್ತಾನ ತಂಡ, ಇಂಗ್ಲೆಂಡ್ (Pakistan vs England) ವಿರುದ್ಧ 7 ಟಿ20 ಪಂದ್ಯಗಳ ಸರಣಿಯಲ್ಲಿ ನಿರತವಾಗಿದ್ದು, ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಪಾಕ್ ಪಡೆ, 2ನೇ ಟಿ20 ಪಂದ್ಯದಲ್ಲಿ ದಾಖಲೆಯ ಜಯ ಸಾದಿಸಿತ್ತು. ಆದರೆ 3ನೇ ಪಂದ್ಯದಲ್ಲಿ ಎಡವಿದ ಬಾಬರ್ ಪಡೆ, ಆಂಗ್ಲರ ವಿರುದ್ಧದ ಸರಣಿಯಲ್ಲಿ 2ನೇ ಸೋಲು ಕಂಡಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಪಾಕ್ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್ ಪಡೆಯಲ್ಲಿ ಹಲವು ಹೊಸ ಮುಖಗಳು ಕಾಣಿಸಿಕೊಂಡಿವೆ. ಹಿರಿಯ ಆಟಗಾರರು ವಿಶ್ವಕಪ್ ದೃಷ್ಟಿಯಿಂದ ವಿಶ್ರಾಂತಿ ಪಡೆದಿದ್ದು, ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ತಂಡದಲ್ಲಿ ಇಂಗ್ಲೆಂಡ್ ಮಂಡಳಿ ಸ್ಥಾನ ನೀಡಿದೆ. ತಾವು ಗಿಟ್ಟಿಸಿಕೊಂಡ ಸ್ಥಾನಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿರುವ ಇಂಗ್ಲೆಂಡ್ ಯುವ ಆಟಗಾರರು ಪ್ರತಿ ಪಂದ್ಯದಲ್ಲೂ ಒಬ್ಬೋಬ್ಬರು ಮಿಂಚುತ್ತಿದ್ದಾರೆ. ಈಗ ಅವರ ಪಟ್ಟಿಗೆ ಯುವ ಬ್ಯಾಟರ್ ಹ್ಯಾರಿ ಬ್ರೂಕ್ (Harry Brook) ಸೇರಿಕೊಂಡಿದ್ದಾರೆ.
ಧೂಳೆಬ್ಬಿಸಿದ 23 ವರ್ಷದ ಬ್ಯಾಟ್ಸ್‌ಮನ್..
ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್‌ನ ದೇಶೀಯ ಟೂರ್ನಿಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ 23ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಈ ವರ್ಷ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದರು. ಆದರೆ ಬ್ರೂಕ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಅಷ್ಟಾಗಿ ಉತ್ತಮ ಆರಂಭ ಸಿಕ್ಕಿರಲಿಲ್ಲ. ಆದರೆ, ಪಾಕಿಸ್ತಾನ ಪ್ರವಾಸದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿರುವ ಈ ಯುವ ಬ್ಯಾಟರ್, ಕರಾಚಿಯಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 42 ರನ್ ಗಳಿಸಿದ್ದರೆ, ಮೂರನೇ ಪಂದ್ಯದಲ್ಲಿ ಸಿಡಲಬ್ಬರದ ಅರ್ಧಶತಕ ಸಿಡಿಸಿದ್ದಾರೆ.
24 ಎಸೆತಗಳಲ್ಲಿ ಮೊದಲ ಅರ್ಧ ಶತಕ
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಬ್ರೂಕ್ ಇಂಗ್ಲೆಂಡ್ ತಂಡದ ರನ್ ವೇಗ ಹೆಚ್ಚಿಸಿದರು. ಆರಂಭದಿಂದಲೂ ಪಾಕ್ ತಂಡದ ಪ್ರತಿಯೊಬ್ಬ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್‌ಗಳ ಮಳೆಗರೆದ ಬ್ರೂಕ್, ಮೊದಲ ಎಸೆತದಿಂದಲೇ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದರು. ಬಳಿಕ ಬ್ರೂಕ್, ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿಯನ್ನು ಬಾರಿಸುವುದರೊಂದಿಗೆ ತಮ್ಮ T20 ಇಂಟರ್‌ನ್ಯಾಶನಲ್‌ನಲ್ಲಿ ಚೊಚ್ಚಲ ಅರ್ಧಶತಕವನ್ನು ಪೂರೈಸಿದಿರು.
8 ಬೌಂಡರಿ, 5 ಸಿಕ್ಸರ್‌ಗಳ ಭರ್ಜರಿ ಜೊತೆಯಾಟ..
ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಬ್ರೂಕ್ ಆಯ್ಕೆಗಾರರ ನಂಬಿಕೆಯನ್ನು ಈ ಸರಣಿಯಲ್ಲಿ ಉಳಿಸಿಕೊಂಡಿದ್ದಾರೆ. ಸ್ಟಾರ್ ಬೌಲರ್ಗಳನ್ನು ಸದೆಬಡಿಯುವ ಸಾಮರ್ಥ್ಯ ತನ್ನಲ್ಲಿದೆ ಎಂಬುದನ್ನು ಸಾಭೀತುಪಡಿಸಿರುವ ಬ್ರೂಕ್ಸ್ ಘಟಾನುಘಟಿ ಬ್ಯಾಟರ್ಗಳೇ ತುಂಬಿರುವ ಆಂಗ್ಲ ತಂಡಕ್ಕೆ ಭರ್ಜರಿ ಎಂಟ್ರಿಕೊಟ್ಟಿದ್ದಾರೆ. ಅಂತಿಮವಾಗಿ ಬ್ರೂಕ್, ಕೇವಲ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 81 ರನ್ ಗಳಿಸಿದರು. ಇನ್ನೊಂದು ತುದಿಯಿಂದ ಬ್ರೂಕ್ ಜೊತೆಗೆ ಉತ್ತಮ ಜೊತೆಯಾಟ ಆಡಿದ ಬೆನ್ ಡಕೆಟ್ ಕೂಡ ಅರ್ಧಶತಕ ದಾಖಲಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 69 ಎಸೆತಗಳಲ್ಲಿ 139 ರನ್‌ಗಳ ಜೊತೆಯಾಟ ನೀಡಿದರು. ಈ ಇಬ್ಬರ ಅಬ್ಬರದ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ 20 ಓವರ್ಗಳಿಗೆ 221 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಇಂಗ್ಲೆಂಡ್ ತಂಡ 63 ರನ್‌ಗಳ ಜಯ ಸಾಧಿಸಿ, ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪರ ನಿರ್ಣಾಯಕ ಇನ್ನಿಂಗ್ಸ್ ಆಡಿದ ಬ್ರೂಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.