AUS vs IND: ದ್ವಿತೀಯ ದಿನದಾಟ ಅಂತ್ಯ: ಹೆಡ್, ಸ್ಮಿತ್ ಸೆಂಚುರಿ ನಡುವೆ ಮಿಂಚಿದ ಬುಮ್ರಾ

|

Updated on: Dec 15, 2024 | 1:48 PM

Australia vs India, 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಬ್ರಿಸ್ಬೇನ್​ನಲ್ಲಿ ನಡೆಯುತ್ತಿದೆ. ಪರ್ತ್​ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​​ಗಳ ಜಯ ಸಾಧಿಸಿತ್ತು. ಇನ್ನು ಅಡಿಲೇಡ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.

AUS vs IND: ದ್ವಿತೀಯ ದಿನದಾಟ ಅಂತ್ಯ: ಹೆಡ್, ಸ್ಮಿತ್ ಸೆಂಚುರಿ ನಡುವೆ ಮಿಂಚಿದ ಬುಮ್ರಾ
India vs Australia
Follow us on

ಬ್ರಿಸ್ಬೇನ್​​ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ 2ನೇ ದಿನದಾಟವು ಅಂತ್ಯಗೊಂಡಿದೆ. ದ್ವಿತೀಯ ದಿನದಾಟದಲ್ಲಿ ಆಸ್ಟ್ರೇಲಿಯನ್ ಬ್ಯಾಟರ್​ಗಳು ಪರಾಕ್ರಮ ಮೆರೆದರೂ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಮಳೆಯ ಕಾರಣ ಮೊದಲ ದಿನದಾಟವು ಕೇವಲ 13.2 ಓವರ್​ಗಳಿಗೆ ಸೀಮಿತವಾಗಿತ್ತು. 28 ರನ್​ಗಳೊಂದಿಗೆ ದ್ವಿತೀಯ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಬುಮ್ರಾ ಯಶಸ್ವಿಯಾದರು.

ಉಸ್ಮಾನ್ ಖ್ವಾಜಾ (21) ಹಾಗೂ ನಾಥನ್ ಮೆಕ್​ಸ್ವೀನಿ (9) ವಿಕೆಟ್ ಕಬಳಿಸಿ ಬುಮ್ರಾ ಟೀಮ್ ಇಂಡಿಯಾಗೆ ಆರಂಭಿಕ ಮೇಲುಗೈ ತಂದುಕೊಟ್ಟರು. ಈ ಹಂತದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ (12) ನಿತೀಶ್ ಕುಮಾರ್ ರೆಡ್ಡಿ ಎಸೆತದಲ್ಲಿ ಔಟಾದರು.

ಈ ವೇಳೆ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅಮೋಘ ಜೊತೆಯಾಟದೊಂದಿಗೆ ಟೀಮ್ ಇಂಡಿಯಾ ಬೌಲರ್​​ಗಳ ಬೆಂಡೆತ್ತಿದರು. ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೆಡ್ ಕೇವಲ 115 ಎಸೆತಗಳಲ್ಲಿ ಶತಕ ಪೂರೈಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಸ್ಮಿತ್ 185 ಎಸೆತಗಳಲ್ಲಿ ತಮ್ಮ 33ನೇ ಟೆಸ್ಟ್ ಸೆಂಚುರಿ ಸಿಡಿಸಿದರು.

ಈ ಮೂಲಕ ಆಸ್ಟ್ರೇಲಿಯಾ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ ಶತಕ ಬಾರಿಸಿದ ಸ್ಟೀವ್ ಸ್ಮಿತ್ (101) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (5) ಕೂಡ ವಿಕೆಟ್ ಒಪ್ಪಿಸಿದರು.

ಇನ್ನು 160 ಎಸೆತಗಳಲ್ಲಿ 18 ಫೋರ್​​ಗಳೊಂದಿಗೆ 152 ರನ್​ ಸಿಡಿಸಿ ಅಬ್ಬರಿಸಿದ್ದ ಟ್ರಾವಿಸ್ ಹೆಡ್​ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಈ ಮೂಲಕ ಜಸ್​ಪ್ರೀತ್ ಬುಮ್ರಾ 5 ವಿಕೆಟ್​ಗಳ ಸಾಧನೆ ಮಾಡಿದರು.

ಟ್ರಾವಿಸ್ ಹೆಡ್ ಔಟಾದ ಬೆನ್ನಲ್ಲೇ ನಾಯಕ ಪ್ಯಾಟ್ ಕಮಿನ್ಸ್ (20) ಮೊಹಮ್ಮದ್ ಸಿರಾಜ್​ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್​ನೊಂದಿಗೆ ದ್ವಿತೀಯ ದಿನದಾಟ ಅಂತ್ಯವಾಯಿತು. 2ನೇ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 7 ವಿಕೆಟ್ ಕಳೆದುಕೊಂಡು 405 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಅಲೆಕ್ಸ್ ಕ್ಯಾರಿ (45) ಹಾಗೂ ಮಿಚೆಲ್ ಸ್ಟಾರ್ಕ್ (7) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: W,W,W,W,W: ಟೆಸ್ಟ್​ನಲ್ಲಿ ಇತಿಹಾಸ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ

ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 25 ಓವರ್​ಗಳಲ್ಲಿ 72 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇನ್ನು 24.4 ಓವರ್​ ಎಸೆದ ಆಕಾಶ್ ದೀಪ್ ಹಾಗೂ 16 ಓವರ್ ಮಾಡಿದ ರವೀಂದ್ರ ಜಡೇಜಾ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.