ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಕೊನೆಯ ಪಂದ್ಯವು ಗುರುವಾರ, ಮಾರ್ಚ್ 9 ರಂದು ಪ್ರಾರಂಭವಾಗುತ್ತಿದೆ. ಭಾರತಕ್ಕೆ ಸರಣಿ ಗೆಲ್ಲುವ ಅವಕಾಶವಿದೆ, ಆದರೆ ಇಂದೋರ್ ಟೆಸ್ಟ್ (Indore Test) ಗೆಲುವಿನ ನಂತರ ಆಸ್ಟ್ರೇಲಿಯಾ ಕೂಡ ಕೊನೆಯ ಟೆಸ್ಟ್ ಗೆದ್ದು, ಸರಣಿ ಡ್ರಾ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿರುವುದರಿಂದ ಈ ಕೊನೆಯ ಟೆಸ್ಟ್ ಮೇಲೆ ಎಲ್ಲರ ಕಣ್ಣು ನಿಟ್ಟಿದೆ. ಅಲ್ಲದೆ, ಕೊನೆಯ ಟೆಸ್ಟ್ ಪಂದ್ಯ ವೀಕ್ಷಿಸಲು ಭಾರತ ಹಾಗೂ ಆಸ್ಟ್ರೇಲಿಯಾದ ಪ್ರಧಾನಿಗಳು (Prime Minister) ಮೈದಾನಕ್ಕೆ ಆಗಮಿಸುತ್ತಿರುವುದು ಕೂಡ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೀಗಾಗಿ ಎರಡೂ ತಂಡಗಳ ಕೂಡ ಬಲಿಷ್ಠ ತಂಡಗಳೊಂದಿಗೆ ಮೈದಾನಕ್ಕಿಳಿಯುವ ಯೋಜನೆಯಲ್ಲಿವೆ. ಇದರಲ್ಲಿ ಈ ಪಂದ್ಯ ಭಾರತಕ್ಕೆ ಬಹಳ ಮಹತ್ವದ್ದಾಗಿರುವುದರಿಂದ ತಂಡದಲ್ಲಿ ಯಾವೆಲ್ಲ ಆಟಗಾರರಿರುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ.
ಇಂದೋರ್‌ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯ ಟೀಂ ಇಂಡಿಯಾದಲ್ಲಿನ ಬದಲಾವಣೆಗೆ ಸಾಕ್ಷಿಯಾಗಿತ್ತು. ಆ ಪಂದ್ಯದಲ್ಲಿ ಭಾರತ ತಂಡ ಕೆಎಲ್ ರಾಹುಲ್ ಅವರನ್ನು ಕೈಬಿಡುವುದರೊಂದಿಗೆ ಮೊಹಮ್ಮದ್ ಶಮಿ ಅವರಿಗೂ ವಿಶ್ರಾಂತಿ ನೀಡಿತ್ತು. ಈ ಇಬ್ಬರ ಬದಲಿಗೆ ಶುಭ್ಮನ್ ಗಿಲ್ ಮತ್ತು ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿತ್ತು. ಆದರೆ ರಾಹುಲ್ ಬದಲಿಗೆ ಬಂದಿದ್ದ ಗಿಲ್ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಉಮೇಶ್ ಮಾತ್ರ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ಹೀಗಾಗಿ ಮುಂದಿನ ಟೆಸ್ಟ್‌ನಲ್ಲೂ ಇಬ್ಬರೂ ಆಡುವ ಸಾಧ್ಯತೆ ಬಲವಾಗಿದೆ.
ಆದರೆ, ಬೌಲಿಂಗ್‌ನಲ್ಲಿ ಬದಲಾವಣೆಯಾಗಬೇಕಿದ್ದು, ಕೊನೆಯ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಮೊಹಮ್ಮದ್ ಶಮಿ ತಂಡಕ್ಕೆ ಮರಳುವುದು ಖಚಿತವಾಗಿದೆ, ಹೀಗಾಗಿ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವೂ ಸರಳವಾಗಿದ್ದು, ಶಮಿ ಮತ್ತು ಉಮೇಶ್ ಹಳೆಯ ಚೆಂಡಿನೊಂದಿಗೆ ರಿವರ್ಸ್ ಸ್ವಿಂಗ್ ಮಾಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೆ ಮೂವರೂ ಸ್ಪಿನ್ನರ್‌ಗಳ ಉಪಸ್ಥಿತಿಯಿಂದಾಗಿ ವೇಗಿಗಳಿಗೆ ಬೌಲಿಂಗ್ ಮಾಡುವ ಅವಕಾಶ ಕಡಿಮೆಯಾಗಿದೆ, ಅದು ಅಹಮದಾಬಾದ್‌ನಲ್ಲಿಯೂ ಮುಂದುವರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏಕದಿನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಸಿರಾಜ್ಗೆ ವಿಶ್ರಾಂತಿ ನೀಡುವ ಅವಕಾಶವೂ ಇದೆ.
ಬ್ಯಾಟಿಂಗ್‌ನಲ್ಲಿ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ಆತಂಕಕ್ಕೆ ಕಾರಣವಾಗಿದೆ. ಗಿಲ್ ಒಂದು ಟೆಸ್ಟ್ ಮಾತ್ರ ಆಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಟೆಸ್ಟ್‌ನಲ್ಲೂ ಅವರು ಆಡುವುದು ನಿಶ್ಚಿತ. ಆದರೆ ಕೊಹ್ಲಿ ಫಾರ್ಮ್ ಟೀಂ ಇಂಡಿಯಾಕ್ಕೆ ದೊಡ್ಡ ಟೆನ್ಶನ್ ಆಗಿದೆ. ಶ್ರೇಯಸ್ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಈ ಇಬ್ಬರ ಬದಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಯ್ಕೆಗೆ ಲಭ್ಯರಿರಲಿದ್ದಾರೆ. ಆದರೆ, ಕೊನೆಯ ಟೆಸ್ಟ್‌ನಲ್ಲಿ ಇಂತಹ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಗಳು ತೀರಕಡಿಮೆ.
ವಿಕೆಟ್‌ಕೀಪರ್ ಕೆಎಸ್ ಭರತ್ ಬದಲಿಗೆ ಇಶಾನ್ ಅವರನ್ನು ಕಣಕ್ಕಿಳಿಸಬಹುದು ಎಂಬ ವರದಿಗಳೂ ಇವೆ. ಇದಕ್ಕೆ ಪೂರಕವೆಂಬಂತೆ ಇದುವರೆಗೆ ಆಡಿದ ಇನ್ನಿಂಗ್ಸ್‌ನಲ್ಲಿ ಭರತ್ ಅವರ ಬ್ಯಾಟಿಂಗ್ ತೀರ ಕಳಪೆಯಾಗಿದೆ. ಆದರೆ ಇಶಾನ್ ಸ್ಪಿನ್ನರ್‌ಗಳ ಮುಂದೆ ಕೀಪಿಂಗ್ ಮಾಡುವಲ್ಲಿ ಭರತ್‌ನಷ್ಟು ಯಶಸ್ವಿಯಾಗುತ್ತಾರಾ ಎಂಬುದು ಪ್ರಶ್ನೆ. ಹೀಗಾಗಿ ಈ ಪಂದ್ಯದಲ್ಲೂ ಭರತ್ಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Wed, 8 March 23