IND vs AUS: ಬೆಂಗಳೂರಿನಲ್ಲೂ ಸೋತ ಆಸೀಸ್; 4-1 ಅಂತರದಿಂದ ಸರಣಿ ಗೆದ್ದ ಭಾರತ

|

Updated on: Dec 03, 2023 | 11:07 PM

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತ 6 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 4-1 ಅಂತರದಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

IND vs AUS: ಬೆಂಗಳೂರಿನಲ್ಲೂ ಸೋತ ಆಸೀಸ್; 4-1 ಅಂತರದಿಂದ ಸರಣಿ ಗೆದ್ದ ಭಾರತ
ಭಾರತ- ಆಸ್ಟ್ರೇಲಿಯಾ
Follow us on

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತ 6 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆಸ್ಟ್ರೇಲಿಯಾಕ್ಕೆ ಗೆಲ್ಲಲು 161 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 4-1 ಅಂತರದಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪವರ್​ ಪ್ಲೇನಲ್ಲಿಯೇ ತಂಡ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಕ್ರಮವಾಗಿ 21 ಮತ್ತು 10 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಸೂರ್ಯ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು ಆದರೆ ಉಪನಾಯಕನ ಜವಬ್ದಾರಿ ನಿರ್ವಹಿಸಿದ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಕಲೆಹಾಕಿದರು.

ಅಧರ್ಶತಕ ಬಾರಿಸಿದ ಅಯ್ಯರ್

ಶ್ರೇಯಸ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿದರೆ, ರಿಂಕು ಸಿಂಗ್ 6 ರನ್ ಗಳಿಗೆ ಸುಸ್ತಾದರು. ವಿಕೆಟ್ ಕೀಪರ್ ಜಿತೇಶ್ ಶರ್ಮಾ 24 ರನ್ ಮತ್ತು ಅಕ್ಷರ್ ಪಟೇಲ್ 31 ರನ್​ಗಳ ಕೊಡುಗೆ ನೀಡಿದರು. ಹೀಗಾಗಿ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.

ಆಸೀಸ್ ಇನ್ನಿಂಗ್ಸ್ ಹೀಗಿತ್ತು

ಭಾರತ ನೀಡಿದ 161 ರನ್​ಗಳ ಸವಾಲು ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಬೆನ್ ಮೆಕ್‌ಡರ್ಮಾಟ್ ಗರಿಷ್ಠ 54 ರನ್ ಗಳಿಸಿದರು. ಇವರೊಂದಿಗೆ ಆರಂಭಿಕ ಟ್ರಾವಿಸ್ ಹೆಡ್ 28 ರನ್ ಕೊಡುಗೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ 17 ರನ್ ಮತ್ತು ಮ್ಯಾಥ್ಯೂ ಶಾರ್ಟ್ 16 ರನ್ ಸೇರಿಸಿದರೆ, ಆರನ್ ಹಾರ್ಡಿ 6 ರನ್ ಗಳಿಸಿ ಜೋಶ್ ಫಿಲಿಪ್ಪಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೆನ್ ದ್ವಾರ್ಶುಯಿಸ್ ಅವರು ಬಂದ ತಕ್ಷಣ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಗೆಲುವಿಗಾಗಿ ಹೋರಾಡಿದ ನಾಯಕ ವೇಡ್ 22 ರನ್​ಗಳ ಹೋರಾಟದ ಇನ್ನಿಂಗ್ಸ್ ಆಡಿ ಕೊನೆಯ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಭಾರತದ ಪರ ಮುಖೇಶ್ ಕುಮಾರ್ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರೆ, ರವಿ ಬಿಷ್ಣೋಯ್ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿದರು. ಅಕ್ಷರ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 pm, Sun, 3 December 23