India vs Australia: ಹರ್ಮನ್ ಸ್ಫೋಟಕ ಆಟ, ಮಿಥಾಲಿ-ಯಸ್ತಿಕಾ ಶತಕದ ಜೊತೆಯಾಟ: ಆಸೀಸ್ಗೆ 278 ರನ್ಸ್ ಟಾರ್ಗೆಟ್
Womens World Cup 2022, India Women vs Australia Women: ಮೂರನೇ ವಿಕೆಟ್ಗೆ ಜೊತೆಯಾದ ನಾಯಕಿ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಾಟಿಯಾ ಎಚ್ಚರಿಕೆಯ ಆಟಕ್ಕೆ ಮುಂದಾದರು. ದೊಡ್ಡ ಹೊಡೆತಕ್ಕೆ ಮಾರು ಹೋಗದೆ ಒಂದು, ಎರಡು ರನ್ ಕಲೆಹಾಕುತ್ತಾ ತಂಡದ ಮೊತ್ತವನ್ನು ಈ ಜೋಡಿ 100ರ ಗಡಿದ ದಾಟಿಸಿತು.
12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Womens World Cup 2022) ಟೂರ್ನಿಯ 18ನೇ ಪಂದ್ಯದಲ್ಲಿಂದು ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡ (India Women vs Australia Women) ಸೆಣೆಸಾಟ ನಡೆಸುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ಕಾಂಗರೂ ಪಡೆಗೆ ಸವಾಲಿನ ಟಾರ್ಗೆಟ್ ನೀಡಿದೆ. ಆರಂಭಿಕರ ವೈಫಲ್ಯದ ನಡುವೆ ಶತಕದ ಜೊತೆಯಾಟ ಆಡಿದ ನಾಯಕಿ ಮಿಥಾಲಿ ರಾಜ್ (Mithali Raj) ಹಾಗೂ ಯಸ್ತಿಕಾ ಭಾಟಿಯಾ ತಂಡಕ್ಕೆ ಆಧಾರವಾಗಿ ನಿಂತರು. ಅಂತಿಮ ಹಂತದಲ್ಲಿ ಉಪ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ತಂಡಕ್ಕೆ ನೆರವಾದರು. ಇವರ ಹೋರಾಟದ ಫಲದಿಂದ ಭಾರತ 50 ಓವರ್ಗಳಲ್ಲಿ 277 ರನ್ ಬಾರಿಸಿದೆ. ಭಾರತಕ್ಕೆ ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು, ಇನ್ನೆರಡರಲ್ಲಿ ಸೋತಿರುವ ಭಾರತ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಉಳಿಸಿಕೊಳ್ಳಬೇಕಾದರೆ ಗೆಲ್ಲಬೇಕಾದ ಒತ್ತಡದಲ್ಲಿದೆ. ಇಲ್ಲವಾದರೆ ಲೀಗ್ ಹಂತದಿಂದಲೇ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಆಸ್ಟ್ರೇಲಿಯಾಕ್ಕೆ ಭಾರತ ಸೋಲಿನ ರುಚಿ ತೋರಿಸಬೇಕಾದ ಅಗತ್ಯ ಉಂಟಾಗಿದೆ.
ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದೆ. ದೀಪ್ತಿ ಶರ್ಮಾ ಬದಲು ಶಫಾಲಿ ವರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಅದು ಯಶಸ್ವಿಯಾಗಲಿಲ್ಲ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ತನ್ನ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭರ್ಜರಿ ಫಾರ್ಮ್ನಲ್ಲಿದ್ದ ಸ್ಮೃತಿ ಮಂದಾನ ಕೇವಲ 11 ಎಸೆತಗಳಲ್ಲಿ 10 ರನ್ಗೆ ಔಟಾದರೆ, ಶಫಾಲಿ 16 ಎಸೆತಗಳಲ್ಲಿ ತಲಾ 1 ಫೋರ್, ಸಿಕ್ಸರ್ನೊಂದಿಗೆ 12 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು. ಈ ಎರಡೂ ವಿಕೆಟ್ಗಳನ್ನು ಟಾರ್ಸಿ ಬ್ರೌನ್ ಪಡೆದುಕೊಂಡರು.
ಈ ಸಂದರ್ಭ ಮೂರನೇ ವಿಕೆಟ್ಗೆ ಜೊತೆಯಾದ ನಾಯಕಿ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಾಟಿಯಾ ಎಚ್ಚರಿಕೆಯ ಆಟಕ್ಕೆ ಮುಂದಾದರು. ದೊಡ್ಡ ಹೊಡೆತಕ್ಕೆ ಮಾರು ಹೋಗದೆ ಒಂದು, ಎರಡು ರನ್ ಕಲೆಹಾಕುತ್ತಾ ತಂಡದ ಮೊತ್ತವನ್ನು ಈ ಜೋಡಿ 100ರ ಗಡಿದ ದಾಟಿಸಿತು. ಇಬ್ಬರೂ ತಂಡಕ್ಕೆ ಆಧಾರವಾಗಿ ಅರ್ಧಶತಕ ಪೂರೈಸಿದರು. ಇವರಿಬ್ಬರ ಖಾತೆಯಿಂದ ಒಟ್ಟು 130 ರನ್ಗಳ ಜೊತೆಯಾಟ ಮೂಡಿಬಂತು. ಯಸ್ತಿಕಾ 83 ಎಸೆತಗಳಲ್ಲಿ 6 ಫೋರ್ನೊಂದಿಗೆ 59 ರನ್ ಬಾರಿಸಿ ಔಟಾದರೆ, ಮಿಥಾಲಿ 96 ಎಸೆತಗಳಲ್ಲಿ 5 ಫೋರ್, 1 ಸಿಕ್ಸರ್ನೊಂದಿಗೆ 68 ರನ್ ಸಿಡಿಸಿದರು.
ಇವರಿಬ್ಬರ ನಿರ್ಗಮನದ ಬಳಿಕ ರಿಚ್ಚಾ ಘೋಷ್ (8) ಹಾಗೂ ಸ್ನೇಹ್ ರಾಣ (0) ಬೇಗನೆ ಔಟಾದರು. ಆದರೆ, ನಿಂತು ಆಡಿದ ಹರ್ಮನ್ಪ್ರೀತ್ ಕೌರ್ ಕೊನೇ ಹಂತದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಕೇವಲ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 57 ರನ್ ಚಚ್ಚಿದರು. ಇವರ ಜೊತೆ ಸೇರಿದ ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ 34 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 3 ವಿಕೆಟ್ ಕಿತ್ತರೆ, ಅಲ್ನಾ ಕಿಂಗ್ 2 ವಿಕೆಟ್ ಪಡೆದರು.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ಹರ್ಮನ್ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮೆಗ್ ಲ್ಯಾನಿಂಗ್ (ನಾಯಕಿ), ರಚೆಲ್ ಹೇನ್ಸ್ (ಉಪನಾಯಕಿ), ಅಲೈಸಾ ಹೀಲಿ, ಎಲೈಸ್ ಪೆರಿ, ಬೆತ್ ಮೂನಿ, ತಹಿಲಾ ಮೆಕ್ಗ್ರಾಥ್, ಆಯಶ್ಲಿ ಗಾರ್ಡನರ್, ಜೆಸ್ ಜಾನ್ಸನ್, ಅಲ್ನಾ ಕಿಂಗ್, ಮೆಘನ್ ಶೂಟ್, ಡಾರ್ಸಿ ಬ್ರೌನ್.
IPL 2022 Captains: ಎಂಎಸ್ ಧೋನಿಯಿಂದ ಡುಪ್ಲೆಸಿಸ್ ವರೆಗೆ: ಐಪಿಎಲ್ 2022ರ ನಾಯಕರ ಪಟ್ಟಿ ಇಲ್ಲಿದೆ ನೋಡಿ
Women’s World Cup: ಜೂಲಾನ್ ದ್ವಿಶತಕದ ಪಂದ್ಯ: ಮಹಿಳಾ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ಗೋಸ್ವಾಮಿ
Published On - 9:51 am, Sat, 19 March 22