ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದರಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಆತಿಥೇಯರ ಮಾರಕ ದಾಳಿಯ ಮುಂದೆ ಮಂಡಿಯೂರಿದ ಭಾರತ ಯುವ ಪಡೆ ಮೊದಲ ದಿನವೇ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಕೆಎಲ್ ರಾಹುಲ್, ರಿಷಬ್ ಪಂತ್ ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಕೊಂಚ ಹೋರಾಟದ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ನ್ಯೂಜಿಲೆಂಡ್ ವಿರುದ್ಧದ ಅದೇ ಸಪ್ಪೆ ಪ್ರದರ್ಶನ ಇಲ್ಲಿಯೂ ಮುಂದುವರೆಯಿತು. ಹೀಗಾಗಿ ಇಡೀ ತಂಡ 150 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.
ಮೇಲೆ ಹೇಳಿದಂತೆ ಪರ್ತ್ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಕೈಕೊಟ್ಟಿದೆ. ತಂಡದ 11 ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಪೂರ್ಣ 50 ಓವರ್‌ಗಳ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಇಡೀ ತಂಡ 49.3 ಓವರ್‌ಗಳನ್ನು ಎದುರಿಸಿ 150 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ನಿತೀಶ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರೆ, ರಿಷಭ್ ಪಂತ್ 37 ರನ್ ಹಾಗೂ ಕೆಎಲ್ ರಾಹುಲ್ 26 ರನ್‌ಗಳ ಇನಿಂಗ್ಸ್ ಆಡಿದರು. ಉಳಿದವರಿಂದ ಯಾವುದೇ ಹೋರಾಟದ ಇನ್ನಿಂಗ್ಸ್ ಕಂಡುಬರಲಿಲ್ಲ.
Pacers give Australia the advantage on Day 1 of the Perth Test.#WTC25 | #AUSvIND 📝: https://t.co/lSYXusxmpb pic.twitter.com/LB8XIhdUbG
— ICC (@ICC) November 22, 2024
ಭಾರತಕ್ಕೆ ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ಉತ್ತಮ ಆರಂಭಿಕ ಜೊತೆಯಾಟ ಈ ಸರಣಿಯಲ್ಲೂ ಕಂಡುಬಂದಿದೆ. ನ್ಯೂಜಿಲೆಂಡ್ ವಿರುದ್ಧವೂ ಭಾರತಕ್ಕೆ ಒಂದೇ ಒಂದು ಉತ್ತಮ ಆರಂಭಿಕ ಜೊತೆಯಾಟ ಸಿಕ್ಕಿರಲಿಲ್ಲ. ಇದೀಗ ಆರಂಭಿಕ ಜೋಡಿ ಬದಲಾದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ಹಾಗೂ ಜೈಸ್ವಾಲ್ಗೆ 5 ರನ್‌ಗಳ ಜೊತೆಯಾಟ ನೀಡಲಷ್ಟೇ ಸಾಧ್ಯವಾಯಿತು. ಈ ವೇಳೆ ಜೈಸ್ವಾಲ್ ಸೊನ್ನೆಗೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.
ಎಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ನಿರೀಕ್ಷೆಗಳ ಮೂಟೆ ಹೊತ್ತು ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿ ಐದು ರನ್ ಗಳಿಸಿ ಔಟಾದರೆ, ಧ್ರುವ್ ಜುರೆಲ್ 11 ರನ್‌ಗಳಿಗೆ ಸುಸ್ತಾದರು. ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಮೀರಿ ಹೋಗಲಿಲ್ಲ. ಆದರೆ ಇಲ್ಲಿ ಜೊತೆಯಾದ ಪಂತ್ ಮತ್ತು ನಿತೀಶ್ ಏಳನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ನೀಡಿದರು. ಇವರಿಬ್ಬರಿಂದ ತಂಡ ಶತಕದ ಗಡಿ ದಾಟಲು ಸಾಧ್ಯವಾಯಿತು. ಈ ಇಬ್ಬರು ಉತ್ತಮ ಹೊಡೆತಗಳನ್ನು ಆಡುವ ಮೂಲಕ ಆಸೀಸ್ ಬೌಲರ್ಗಳನ್ನು ಕೆಲ ಸಮಯ ಕಾಡಿದರು.
ಆದರೆ ಈ ಜೊತೆಯಾಟವನ್ನು ಆಸೀಸ್ ನಾಯಕ ಕಮ್ಮಿನ್ಸ್ ಮುರಿದರು. ಪಂತ್ ಔಟಾದ ತಕ್ಷಣ ಮತ್ತೆ ಭಾರತದ ಪೆವಿಲಿಯನ್ ಪರೇಡ್ ಆರಂಭವಾಗಿತು. ಮೊದಲ ಪಂದ್ಯವನ್ನಾಡುತ್ತಿರುವ ಹರ್ಷಿತ್ ರಾಣಾ ಏಳು ರನ್ ಗಳಿಸಿ ಔಟಾದರೆ ಬುಮ್ರಾ ಎಂಟು ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತ ತಂಡದ ಇನ್ನಿಂಗ್ಸ್ 150 ರನ್‌ಗಳಿಗೆ ಕುಸಿಯಿತು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‌ವುಡ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಾರ್ಷ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Fri, 22 November 24