AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: 67 ರನ್​ಗೆ 7 ವಿಕೆಟ್; ಭಾರತದ ಮಾರಕ ದಾಳಿಗೆ ಕಾಂಗರೂಗಳು ಕಕ್ಕಾಬಿಕ್ಕಿ

IND vs AUS: ಪರ್ತ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 150 ರನ್‌ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 7 ವಿಕೆಟ್‌ಗಳ ನಷ್ಟಕ್ಕೆ 67 ರನ್ ಗಳಿಸಿದೆ. ಭಾರತದ ಪರ ಬುಮ್ರಾ 4 ವಿಕೆಟ್ ಪಡೆದರು.

IND vs AUS: 67 ರನ್​ಗೆ 7 ವಿಕೆಟ್; ಭಾರತದ ಮಾರಕ ದಾಳಿಗೆ ಕಾಂಗರೂಗಳು ಕಕ್ಕಾಬಿಕ್ಕಿ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Nov 22, 2024 | 3:43 PM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ಮೊದಲ ದಿನವೇ ಎರಡೂ ತಂಡಗಳು ಮೊದಲ ಇನ್ನಿಂಗ್ಸ್ ಆಡಿದ್ದು, ಇದರಲ್ಲಿ ಟೀಂ ಇಂಡಿಯಾ 150 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಆಸ್ಟ್ರೇಲಿಯಾ ಕೂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ಮೊದಲ ದಿನದಾಟದಂತ್ಯಕ್ಕೆ ಪ್ರಮುಖ 7 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿದೆ. ಭಾರತದ ಪರ ನಾಯಕ ಜಸ್ಪ್ರೀತ್ ಬುಮ್ರಾ ಅಧಿಕ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ಹಾಗೂ ಯುವ ವೇಗಿ ಹರ್ಷಿತ್ ರಾಣಾ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

67 ರನ್​ಗಳಿಗೆ 7 ವಿಕೆಟ್

ಭಾರತವನ್ನು 150 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೂ ಟೀಂ ಇಂಡಿಯಾ ವೇಗಿಗಳು ಆರಂಭದಿಂದಲೂ ಕಾಟ ನೀಡಲು ಶುರು ಮಾಡಿದ್ದರು. ಭಾರತದ ಮಾರಕ ದಾಳಿ ಹೇಗಿತ್ತೆಂದರೆ, ಒಬ್ಬನೇ ಒಬ್ಬ ಆಸೀಸ್ ಬ್ಯಾಟರ್​ಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಲಬುಶೇನ್ ಒಬ್ಬರೇ ಆಸೀಸ್ ಪರ ಅತ್ಯಧಿಕ 52 ಎಸೆತಗಳನ್ನು ಎದುರಿಸಿದರಾದರೂ ಅವರ ಬ್ಯಾಟ್​ನಿಂದ ಬಂದಿದ್ದು ಕೇವಲ 2 ರನ್ ಮಾತ್ರ. ಉಳಿದಂತೆ ಆಸ್ಟ್ರೇಲಿಯಾದ ಯಾವ ಬ್ಯಾಟರ್​ಗೂ 20 ರನ್​ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ತಂಡದ ಪರ ಅಲೆಕ್ಸ್ ಕ್ಯಾರಿ ಅತ್ಯಧಿಕ ಅಜೇಯ 19 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ.

150 ರನ್​ಗಳಿಗೆ ಭಾರತ ಆಲೌಟ್

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಮೊದಲ ಇನ್ನಿಂಗ್ಸ್ 150 ರನ್‌ಗಳಿಗೆ ಅಂತ್ಯವಾಯಿತು. ತಂಡದ ಪರ ನಿತೀಶ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರೆ, ರಿಷಭ್ ಪಂತ್ 37 ರನ್ ಹಾಗೂ ಕೆಎಲ್ ರಾಹುಲ್ 26 ರನ್ ಗಳ ಇನಿಂಗ್ಸ್ ಆಡಿದರು. ಉಳಿದಂತೆ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರೆ, ವಿರಾಟ್ ಕೊಹ್ಲಿ ಐದು ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ. ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು.

ಹೇಜಲ್​ವುಡ್​ಗೆ 4 ವಿಕೆಟ್

ಆದರೆ ಪಂತ್ ಮತ್ತು ನಿತೀಶ್ ಏಳನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ನೀಡಿದರು. ಈ ಜೊತೆಯಾಟವನ್ನು ಕಮ್ಮಿನ್ಸ್ ಮುರಿದರು. ಪಂತ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ 150 ರನ್‌ಗಳಿಗೆ ಕುಸಿಯಿತು. ಅಂತಿಮವಾಗಿ ಹರ್ಷಿತ್ ರಾಣಾ ಏಳು ರನ್ ಗಳಿಸಿ ಔಟಾದರೆ, ಬುಮ್ರಾ ಎಂಟು ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‌ವುಡ್ ನಾಲ್ಕು ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಾರ್ಷ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Fri, 22 November 24