India vs Bangladesh: ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವನಿತೆಯರ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮಹಿಳಾ ಟೀಮ್ ಇಂಡಿಯಾ (Team India) ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ (13) ಹಾಗೂ ಶಫಾಲಿ ವರ್ಮಾ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ಜೆಮಿಮಾ ರೊಡ್ರಿಗಾಸ್ 8 ರನ್ಗಳಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ ಸೊನ್ನೆ ಸುತ್ತಿ ಹಿಂತಿರುಗಿದರು. ಇನ್ನು ಯಾಸ್ತಿಕಾ ಭಾಟಿಯಾ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಹರ್ಲಿನ್ ಡಿಯೋಲ್ ಅವರ ಇನಿಂಗ್ಸ್ 6 ರನ್ಗೆ ಸೀಮಿತವಾಯಿತು.
ಹಾಗೆಯೇ ದೀಪ್ತಿ ಶರ್ಮಾ 10 ರನ್ಗಳಿಸಿ ತುಸು ಹೊತ್ತು ಕ್ರೀಸ್ನಲ್ಲಿದ್ದರೆ, ಅನಮ್ಜೊತ್ ಕೌರ್ 14 ರನ್ಗಳ ಕೊಡಗೆ ನೀಡಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಪೂಜಾ ವಸ್ತ್ರಾಕರ್ ಅಜೇಯ 7 ರನ್ ಬಾರಿಸಿದರೆ, ಮಿನ್ನು ಮಣಿ ಅಜೇಯ 5 ರನ್ಗಳ ಕಾಣಿಕೆ ನೀಡಿದರು. ಪರಿಣಾಮ ಟೀಮ್ ಇಂಡಿಯಾ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.
96 ರನ್ಗಳ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡಕ್ಕೆ ಮಿನ್ನು ಮಣಿ ಆರಂಭಿಕ ಆಘಾತ ನೀಡಿದ್ದರು. 5 ರನ್ಗಳಿಸಿದ್ದ ಶಮೀಮಾ ವಿಕೆಟ್ ಪಡೆದು ಮಿನ್ನು ಮಣಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ದೀಪ್ತಿ ಶರ್ಮಾ 2ನೇ ವಿಕೆಟ್ ಉರುಳಿಸಿದರು.
ಇನ್ನು ಬಾರೆಡ್ಡಿ ಅನುಷಾ ಮುರ್ಶಿದಾ ಖಾತುಂ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಬಾಂಗ್ಲಾ ತಂಡದ ನಾಯಕಿ ನಿಗರ್ ಸುಲ್ತಾನ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಅತ್ತ ಮಿನ್ನು ಮಣಿ ಎಸೆತದಲ್ಲಿ ರಿತು ಮೋಣಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದಿದ್ದರು.
ಇದರ ಬೆನ್ನಲ್ಲೇ ಶೋರ್ನಾ ಅಕ್ತೆರ್ (7)ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ದೀಪ್ತಿ ಶರ್ಮಾ ಯಶಸ್ವಿಯಾದರು. ಕೇವಲ 65 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರೂ ಒಂದೆಡೆ ಬಾಂಗ್ಲಾದೇಶ್ ತಂಡದ ನಾಯಕಿ ನಿಗರ್ ಸುಲ್ತಾನ ಕ್ರೀಸ್ ಕಚ್ಚಿ ನಿಂತಿದ್ದರು.
ಆದರೆ 19ನೇ ಓವರ್ನಲ್ಲಿ ದೀಪ್ತಿ ಶರ್ಮಾರ ಎಸೆತವನ್ನು ಮುನ್ನುಗ್ಗಿ ಬಾರಿಸಲು ಮುಂದಾದ ನಿಗರ್ ಸುಲ್ತಾನ (38) ಸ್ಟಂಪ್ ಔಟಾದರು. ಕೊನೆಯ ಓವರ್ನಲ್ಲಿ ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 10 ರನ್ಗಳ ಅವಶ್ಯಕತೆಯಿತ್ತು. ಟೀಮ್ ಇಂಡಿಯಾಗೆ 4 ವಿಕೆಟ್ಗಳ ಅಗತ್ಯತೆ.
ಈ ವೇಳೆ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಚೆಂಡನ್ನು ಶಫಾಲಿ ವರ್ಮಾ ಕೈಗೆ ನೀಡಿದರು. ಮೊದಲ ಎಸೆತದಲ್ಲಿ 2 ರನ್ ಓಡುವ ತವಕದಲ್ಲಿ ರಾಬಿಯಾ ಖಾನ್ (0) ರನೌಟ್ ಆದರು. 2ನೇ ಎಸೆತದಲ್ಲಿ ನಹೀದಾ ಅಕ್ತೆರ್ (6) ಕ್ಯಾಚ್ ನೀಡಿದರು. 3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 4ನೇ ಎಸೆತದಲ್ಲಿ ಫಹಿಮಾ (0) ಶಫಾಲಿಗೆ ಕ್ಯಾಚ್ ನೀಡಿದರು. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಇನ್ನು ಕೊನೆಯ ಎಸೆತದಲ್ಲಿ ಮರುಫಾ ಅಕ್ತೆರ್ (0) ವಿಕೆಟ್ ಪಡೆದರು.
IND vs WI: ಇಶಾನ್ vs ಭರತ್: ಟೀಮ್ ಇಂಡಿಯಾ ವಿಕೆಟ್ ಕೀಪರ್ ಯಾರು?
ಇದರೊಂದಿಗೆ ಟೀಮ್ ಇಂಡಿಯಾ 8 ರನ್ಗಳಿಂದ ರೋಚಕ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ದೀಪ್ತಿ ಶರ್ಮಾ ಹಾಗೂ ಶಫಾಲಿ ವರ್ಮಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಂಡಿದೆ.