ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಬರೋಬ್ಬರಿ 86 ರನ್ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇತ್ತ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಬಾಂಗ್ಲಾದೇಶ ತಂಡ ಖಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗಬೇಕಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಕೆಟ್ಟ ಆರಂಭ ಸಿಕ್ಕಿತು. ಪವರ್‌ಪ್ಲೇನಲ್ಲಿ ಭಾರತ ತಂಡವು ಅಭಿಷೇಕ್ ಶರ್ಮಾ,ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದ್ದರಿಂದ ಟೀಂ ಇಂಡಿಯಾ ದೊಡ್ಡ ಸ್ಕೋರ್ ತಲುಪಲು ಸಾಧ್ಯವಿಲ್ಲ ಎಂದು ತೋರುತ್ತಿತ್ತು. ಆದರೆ ಇದಾದ ನಂತರ ಜೊತೆಯಾದ ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ನಿತೀಶ್ ರೆಡ್ಡಿ 28 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರೆ, ರಿಂಕು 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ತಮ್ಮ ಅಂತಾರಾಷ್ಟ್ರೀಯ ವೃತ್ತಿಬದುಕಿನ ಎರಡನೇ ಟಿ20 ಪಂದ್ಯವನ್ನಾಡಿದ ನಿತೀಶ್ ರೆಡ್ಡಿ ಭರ್ಜರಿ ಬ್ಯಾಟಿಂಗ್ ಮಾಡಿ 7 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಕೇವಲ 34 ಎಸೆತಗಳಲ್ಲಿ 74 ರನ್‌ಗಳ ಇನಿಂಗ್ಸ್ ಆಡಿದರು. ಅಲ್ಲದೆ ರಿಂಕು ಜೊತೆಗೆ ಶತಕದ ಜೊತೆಯಾಟ ನಡೆಸಿದರು. ರಿಂಕು ಸಿಂಗ್ ಕೂಡ 26 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಸೋಲಿನ ಸೂಚನೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಹಾರ್ದಿಕ್ ಪಾಂಡ್ಯ 32 ರನ್ ಹಾಗೂ ರಿಯಾನ್ ಪರಾಗ್ 15 ರನ್‌ಗಳ ಕಾಣಿಕೆ ನೀಡಿದರು.
Delight in Delhi! 🥳#TeamIndia register a 86-run win in the 2nd T20I and seal the series 2⃣-0⃣
Scorecard – https://t.co/Otw9CpO67y#INDvBAN | @IDFCFIRSTBank pic.twitter.com/KfPHxoSZE4
— BCCI (@BCCI) October 9, 2024
ಭಾರತ ನೀಡಿದ 222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಒತ್ತಡಕ್ಕೆ ಸಿಲುಕಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಎಂದಿನಂತೆ ಅರ್ಷದೀಪ್ ಸಿಂಗ್, ಆರಂಭಿಕ ಎಮಾನ್ರನ್ನು ಬೌಲ್ಡ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ವಾಷಿಂಗ್ಟನ್ ಸುಂದರ್ ಕೂಡ ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದರು.
ಅಭಿಷೇಕ್ ಶರ್ಮಾ, ಮಯಾಂಕ್ ಯಾದವ್ ಮತ್ತು ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರೆ, ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಿದ ನಿತೀಶ್ ರೆಡ್ಡಿ 2 ವಿಕೆಟ್ ಪಡೆದರು. ಬಾಂಗ್ಲಾದೇಶ ಪರ ಅನುಭವಿ ಮಹಮ್ಮದುಲ್ಲಾ ಬಿಟ್ಟರೆ, ಕ್ರೀಸ್‌ನಲ್ಲಿ ನೆಲೆಯೂರಲು ಯಾರೊಬ್ಬರೂ ತಲೆಕೆಡಿಸಿಕೊಳ್ಳಲಿಲ್ಲ. ಲಿಟನ್ ದಾಸ್, ಶಾಂಟೊ, ಮೆಹದಿ ಹಸನ್ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಅಂತಿಮವಾಗಿ ಟೀಂ ಇಂಡಿಯಾ ಅದ್ಭುತ ಜಯ ದಾಖಲಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Wed, 9 October 24