
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಫೆಬ್ರವರಿ 20 ರಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗೆಲುವಿಗಾಗಿ ಪರಸ್ಪರ ಕಾದಾಡಲಿವೆ. ಆದರೆ ಅದಕ್ಕೂ ಮುನ್ನ ಹವಾಮಾನ ಇಲಾಖೆ ನೀಡಿರುವ ವರದಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ವರದಿಯ ಪ್ರಕಾರ ಪಂದ್ಯದ ದಿನ ಮಳೆ ಬರುವ ನಿರೀಕ್ಷೆಯಿದೆ. ಹೆಚ್ಚಿನ ಸಮಯ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯೂ ಇದೆ. ಹವಾಮಾನ ವೈಪರೀತ್ಯದಿಂದಾಗಿ ಭಾರತ ತಂಡವು ಮೊದಲ ಪಂದ್ಯದಲ್ಲೇ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿದ್ದು, ಇದರಿಂದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಮುಂದಿನ ಹಾದಿಯೂ ಕಷ್ಟಕರವಾಗಬಹುದು.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ದಿನವಾದ ಫೆಬ್ರವರಿ 20 ರಂದು ಅಂದರೆ ನಾಳೆ ದುಬೈನಲ್ಲಿ ಮಳೆಯಾಗಬಹುದು ಎಂದು ಹೇಳಲಾಗುತ್ತಿದೆ. ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಹಗಲಿನಲ್ಲಿ ತಾಪಮಾನವು ಕ್ರಮೇಣ ಹೆಚ್ಚಾಗುತ್ತಿದ್ದರೆ, ರಾತ್ರಿಯ ಹೊತ್ತಿಗೆ ಅದು ಸಾಕಷ್ಟು ಆರ್ದ್ರವಾಗಬಹುದು. ಮಳೆಯಿಂದಾಗಿ ಟೀಮ್ ಇಂಡಿಯಾ ತೊಂದರೆ ಎದುರಿಸಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ರೋಹಿತ್ ತನ್ನ ತಂತ್ರಗಳನ್ನು ಸಹ ಬದಲಾಯಿಸಬೇಕಾಗುತ್ತದೆ. ಹಾಗೆಯೇ ಈ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ದುಬೈನ ಪಿಚ್ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗಿಬ್ಬರಿಗೂ ಸಮಾನವಾಗಿ ನೆರವಾಗಲಿದೆ. ಇತ್ತೀಚೆಗೆ ILT20 2025 ರ 15 ಪಂದ್ಯಗಳನ್ನು ಇಲ್ಲಿ ಆಡಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಈ ಪಂದ್ಯಗಳು ನಡೆದ ಪಿಚ್‌ಗಳಲ್ಲಿ ಆಡಲಾಗುವುದಿಲ್ಲ. ಟೀಂ ಇಂಡಿಯಾದ ಪಂದ್ಯಗಳಿಗಾಗಿ ಎರಡು ಪಿಚ್‌ಗಳನ್ನು ನಿರ್ಮಿಸಲಾಗಿದೆ. ಹೊಸ ಪಿಚ್‌ನಲ್ಲಿ ಪಂದ್ಯ ನಡೆದರೆ, ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಮಾನ ಸಹಾಯ ಸಿಗುತ್ತದೆ ಎಂದು ಪಿಟಿಐ ಮೂಲಗಳು ತಿಳಿಸಿವೆ. ಆರಂಭದಲ್ಲಿ, ವೇಗಿಗಳು ಪಿಚ್‌ನಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದರೆ ಸಮಯ ಕಳೆದಂತೆ, ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು ಎಂದು ವರದಿಯಾಗಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:00 ಗಂಟೆಗೆ ಟಾಸ್ ನಡೆಯಲಿದೆ. ಪಂದ್ಯ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ, ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ನೆಟ್‌ವರ್ಕ್ 18 ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಹಾಗೆಯೇ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ವೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಬಾಂಗ್ಲಾದೇಶ ತಂಡ: ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮುಷ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹೀದ್ ಹೃದಯ, ಸೌಮ್ಯ ಸರ್ಕಾರ್, ತಂಜಿದ್ ಹಸನ್, ಮಹ್ಮದುಲ್ಲಾ, ಜಾಕರ್ ಅಲಿ, ಮೆಹದಿ ಹಸನ್ ಮಿರಾಜ್, ರಿಷದ್ ಹೊಸೈನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಪರ್ವೇಜ್ ಹೊಸೈನ್, ನಸುಮ್ ಅಹ್ಮದ್, ತಂಜಿಮ್ ಹಸನ್, ನಹಿದ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ