T20 World Cup 2024: ಟಿ20 ವಿಶ್ವಕಪ್ನ 33ನೇ ಪಂದ್ಯದಲ್ಲಿ ಭಾರತ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಫ್ಲೋರಿಡಾದ ಸೆಂಟ್ರಲ್ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ನಲ್ಲಿ ಇಂದು (ಜೂ.15) ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಫ್ಲೋರಿಡಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಇಂದು ಸಹ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಅಕ್ಯುವೆದರ್ ಹವಾಮಾನ ವರದಿ ಪ್ರಕಾರ, ಈ ಪಂದ್ಯದ ಸಮಯದಲ್ಲಿ 35%-45% ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಇಂದು ಫ್ಲೋರಿಡಾದ ಸುತ್ತ ಮುತ್ತ 50% ಗುಡುಗು ಸಹಿತ ಮಳೆಯಾಗಲಿದೆ. ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಶೇ.80 ರಷ್ಟು ತೇವಾಂಶವು ಹೊಂದಿರಲಿದೆ ಎಂದು ತಿಳಿಸಿದೆ.
ಗೂಗಲ್ ಹವಾಮಾನ ವರದಿಯು ಬೆಳಿಗ್ಗೆ ಶೇ.30 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದು ಪಂದ್ಯದ ಉದ್ದಕ್ಕೂ ಸ್ಥಿರವಾಗಿರಲಿದೆ. ಅಂದರೆ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡುವುದು ಖಚಿತ ಎಂದೇ ಹೇಳಬಹುದು.
ಫ್ಲೋರಿಡಾದ ಸೆಂಟ್ರಲ್ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆಯಬೇಕಿದ್ದ ಯುಎಸ್ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಇದೇ ಮೈದಾನದಲ್ಲೇ ಭಾರತ ತಂಡವು ಕೆನಡಾ ವಿರುದ್ಧ ಕಣಕ್ಕಿಳಿಯಬೇಕಿದೆ. ಹೀಗಾಗಿ ಇಂದು ಸಹ ಪಂದ್ಯ ನಡೆಯುವುದು ಅನುಮಾನ ಎಂದೇ ಹೇಳಬಹುದು.
ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಈ ಮೂಲಕ ಒಟ್ಟು 6 ಅಂಕಗಳನ್ನು ಕಲೆಹಾಕಿದೆ. ಈ ಆರು ಅಂಕಗಳೊಂದಿಗೆ ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಹೀಗಾಗಿ ಕೆನಡಾ ವಿರುದ್ಧದ ಇಂದಿನ ಪಂದ್ಯವು ರದ್ದಾದರೂ ಭಾರತ ತಂಡಕ್ಕೆ ಯಾವುದೇ ತೊಂದರೆಯಿಲ್ಲ.
ಭಾರತ ಮತ್ತು ಕೆನಡಾ ನಡುವಣ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೆ ಓವರ್ಗಳ ಕಡಿತದೊಂದಿಗೆ ಪಂದ್ಯ ಆಯೋಜಿಸಬಹುದು. ಇನ್ನು ಫಲಿತಾಂಶ ನಿರ್ಧರಿಸಬೇಕಿದ್ದರೆ ಕನಿಷ್ಠ 5 ಓವರ್ಗಳ ಪಂದ್ಯ ನಡೆಯಬೇಕು. ಈ ಐದು ಓವರ್ಗಳ ಪಂದ್ಯ ಆಯೋಜನೆ ಕೂಡ ಸಾಧ್ಯವಿಲ್ಲ ಎಂದು ಕಂಡು ಬಂದರೆ ಮಾತ್ರ ಮ್ಯಾಚ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ. ಅಲ್ಲದೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ.