T20 World Cup 2024: ಇಂಚುಗಳ ಅಂತರದಲ್ಲಿ ಸೋತ ನೇಪಾಳ..!
T20 World Cup 2024: ನೇಪಾಳ ವಿರುದ್ಧದ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಗ್ರೂಪ್-ಡಿ ನಲ್ಲಿ ಸೋಲಿಲ್ಲದ ಸರದಾರನಾಗಿ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿದೆ. ಈ ಮೂಲಕ ಸೌತ್ ಆಫ್ರಿಕಾ ಒಟ್ಟು 8 ಅಂಕಗಳೊಂದಿಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಇನ್ನು ನೇಪಾಳ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ.
T20 World Cup 2024: ಟಿ20 ವಿಶ್ವಕಪ್ನ 31ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನೇಪಾಳ ತಂಡವು ವಿರೋಚಿತ ಸೋಲನುಭವಿಸಿದೆ. ಕಿಂಗ್ಸ್ಟೌನ್ನ ಅರ್ನೋಸ್ ವೇಲ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್ ಉತ್ತಮ ಆರಂಭ ಒದಗಿಸಿದ್ದರು.
ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರೀಝ ಹೆಂಡ್ರಿಕ್ಸ್ 49 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 43 ರನ್ ಬಾರಿಸಿದರೆ, ಕ್ವಿಂಟನ್ ಡಿಕಾಕ್ ಕೇವಲ 10 ರನ್ಗಳಿಸಿ ಔಟಾಗಿದ್ದರು. ಇನ್ನು ಐಡೆನ್ ಮಾರ್ಕ್ರಾಮ್ (15) ಹಾಗೂ ಹೆನ್ರಿಕ್ ಕ್ಲಾಸೆನ್ (3) ಬೇಗನೆ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಟ್ರಿಸ್ಟನ್ ಸ್ಟಬ್ಸ್ 18 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 27 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು.
ನೇಪಾಳ ಪರ ಕುಶಾಲ್ ಭುರ್ಟೆಲ್ 4 ಓವರ್ಗಳಲ್ಲಿ 19 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದೀಪೇಂದ್ರ ಸಿಂಗ್ 4 ಓವರ್ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ನೇಪಾಳ ತಂಡದ ಕೆಚ್ಚೆದೆಯ ಹೋರಾಟ:
116 ರನ್ಗಳ ಗುರಿ ಪಡೆದ ನೇಪಾಳ ತಂಡವು ಉತ್ತಮ ಆರಂಭ ಪಡೆದಿತ್ತು. ಸೌತ್ ಆಫ್ರಿಕಾದ ಅನುಭವಿ ವೇಗಿಗಳ ವಿರುದ್ಧ ಮೊದಲ ವಿಕೆಟ್ಗೆ ಆರಂಭಿಕರಾದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ 35 ರನ್ಗಳ ಜೊತೆಯಾಟವಾಡಿದ್ದರು.
ಆದರೆ 8ನೇ ಓವರ್ನಲ್ಲಿ ಕುಶಾಲ್ ಭುರ್ಟೆಲ್ (13) ಔಟಾದರು. ಇದರ ಬೆನ್ನಲ್ಲೇ ರೋಹಿತ್ ಪೌಡೆಲ್ (0) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನಿಲ್ ಸಾಹ್ 24 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 27 ರನ್ಗಳ ಕೊಡುಗೆ ನೀಡಿದರು.
ಇದಾಗ್ಯೂ ಮತ್ತೊಂದೆಡೆ ಆಸಿಫ್ ಶೇಖ್ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದರು. 49 ಎಸೆತಗಳನ್ನು ಎದುರಿಸಿದ ಆಸಿಫ್ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 42 ರನ್ ಬಾರಿಸಿ ಔಟಾದರು. ಈ ವೇಳೆಗೆ ನೇಪಾಳ ತಂಡವು 15 ಓವರ್ಗಳಲ್ಲಿ 100 ರನ್ ಕಲೆಹಾಕಿತ್ತು.
ಅಂತಿಮ 2 ಓವರ್ಗಳಲ್ಲಿ ನೇಪಾಳ ತಂಡಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಅನ್ರಿಕ್ ನೋಕಿಯಾ ಎಸೆದ 19ನೇ ಓವರ್ನ ಮೊದಲ 4 ಎಸೆತಗಳಲ್ಲಿ ಯಾವುದೇ ರನ್ ಮೂಡಿ ಬಂದಿರಲಿಲ್ಲ. 5ನೇ ಎಸೆತದಲ್ಲಿ ಸೋಂಪಾಲ್ ಕಮಿ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ 2 ರನ್ ಕಲೆಹಾಕಿದರು.
ಅದರಂತೆ ಕೊನೆಯ 6 ಎಸೆತಗಳಲ್ಲಿ ನೇಪಾಳ ತಂಡಕ್ಕೆ 8 ರನ್ಗಳ ಅವಶ್ಯಕತೆಯಿತ್ತು. ಒಟ್ನೀಲ್ ಬಾರ್ಟ್ಮನ್ ಎಸೆದ ಕೊನೆಯ ಓವರ್ನ ಮೊದಲ 2 ಎಸೆತಗಳನ್ನು ಎದುರಿಸಿದ ಗುಲ್ಶನ್ ಜಾ ಯಾವುದೇ ರನ್ ಕಲೆಹಾಕಲಿಲ್ಲ.
3ನೇ ಎಸೆತದಲ್ಲಿ ಗುಲ್ಶನ್ ಫೋರ್ ಬಾರಿಸಿದರು. 4ನೇ ಎಸೆತದಲ್ಲಿ ಮತ್ತೆರಡು ರನ್ ಕಲೆಹಾಕಿದರು. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ 2 ರನ್ಗಳು ಬೇಕಿತ್ತು. ಬಾರ್ಟ್ಮನ್ ಎಸೆದ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಇತ್ತ ನೇಪಾಳ ಬ್ಯಾಟರ್ಗಳು ರನ್ಗಾಗಿ ಓಡಿದರು.
ಆದರೆ ನಿಧಾನಗತಿಯ ಓಟದಿಂದಾಗಿ ಗುಲ್ಶನ್ ಜಾ ನಾನ್ ಸ್ಟ್ರೈಕರ್ ಎಂಡ್ನಲ್ಲಿ ರನೌಟ್ ಆದರು. ಈ ಮೂಲಕ ಇಂಚುಗಳ ಅಂತರದಿಂದ ನೇಪಾಳ ತಂಡವು ಸೋಲನುಭವಿಸಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು ಕೇವಲ 1 ರನ್ಗಳ ರೋಚಕ ಜಯ ಸಾಧಿಸಿದೆ. ಈ ವಿರೋಚಿತ ಸೋಲಿನ ಬೆನ್ನಲ್ಲೇ ನೇಪಾಳ ಯುವ ಪಡೆಯ ಭರ್ಜರಿ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಅಂತಿಮ ಓವರ್ನ ಕೊನೆಯ ಎಸೆತದ ವಿಡಿಯೋ:
BIGGEST HEART-BREAKING MOMENT IN NEPAL CRICKET HISTORY. 💔 pic.twitter.com/aUeJPAoBvv
— Johns. (@CricCrazyJohns) June 15, 2024
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಚ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟನ್ ಸ್ಟಬ್ಸ್ , ಮಾರ್ಕೊ ಯಾನ್ಸೆನ್ , ಕಗಿಸೊ ರಬಾಡಾ , ಅನ್ರಿಕ್ ನೋಕಿಯಾ, ಒಟ್ನೀಲ್ ಬಾರ್ಟ್ಮನ್ , ತಬ್ರೇಝ್ ಶಮ್ಸಿ.
ಇದನ್ನೂ ಓದಿ: T20 World Cup 2026: ಭಾರತದಲ್ಲಿ ನಡೆಯಲಿರುವ ವಿಶ್ವಕಪ್ಗೆ ನೇರ ಅರ್ಹತೆ ಪಡೆದ ಅಮೆರಿಕ..!
ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ಅನಿಲ್ ಸಾಹ್ , ರೋಹಿತ್ ಪೌಡೆಲ್ (ನಾಯಕ) , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಶನ್ ಜಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಅಬಿನಾಶ್ ಬೋಹರಾ.
Published On - 9:05 am, Sat, 15 June 24