ಒಂದೆಡೆ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಯುವ ಪಡೆ ಶ್ರೀಲಂಕಾ ವಿರುದ್ದ ಏಕದಿನ ಸರಣಿ ಆಡುತ್ತಿದ್ದರೆ, ಅತ್ತ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯಲು ಟೀಮ್ ಇಂಡಿಯಾ ಸೀನಿಯರ್ಸ್ ಸಜ್ಜಾಗುತ್ತಿದ್ದಾರೆ. ಆಗಸ್ಟ್ 4 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವು ಅಭ್ಯಾಸವನ್ನು ಆರಂಭಿಸಿದೆ. ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸ್ಸೈಡ್ ಮೈದಾನದಲ್ಲಿ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ಮುಖಾಮುಖಿಯಾಗಿವೆ. ಇಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ರೋಹಿತ್ ಶರ್ಮಾ ಎಂಬುದು ವಿಶೇಷ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಅಲ್ಲದೆ ಭಾರತ ತಂಡದ ನಾಯಕತ್ವ ಬದಲಾವಣೆ ಅನಿವಾರ್ಯ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಇದೀಗ ಅಭ್ಯಾಸ ಪಂದ್ಯದಲ್ಲಿ ಹಿಟ್ಮ್ಯಾನ್ ಕ್ಯಾಪ್ಟನ್ ಆಗಿ ಕಣಕ್ಕಿಳಿದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ಈ ಕಾರಣದಿಂದ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಅಲ್ಲ ಎಂಬುದು ವಿಶೇಷ.
ಹೌದು, ಟೀಮ್ ಇಂಡಿಯಾ ಉಪನಾಯಕನಾಗಿ ಅಜಿಂಕ್ಯ ರಹಾನೆ ಇದ್ದು, ಅವರು ಕೂಡ ಅಭ್ಯಾಸ ಪಂದ್ಯಕ್ಕೆ ಗೈರಾಗಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಾಗ್ಯೂ ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್ನಲ್ಲಿ ಶುರುವಾಗಲಿರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ವಿರಾಟ್ ಕೊಹ್ಲಿ ಅವರೇ ಮುನ್ನಡೆಸಲಿದ್ದಾರೆ.
ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ದ ಕಣಕ್ಕಿಳಿದಿರುವ ಟೀಮ್ ಇಂಡಿಯಾ ಇಲೆವೆನ್ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಭಾರತ ತಂಡದ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 4 ರಿಂದ 8ವರೆಗೆ ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ 2ನೇ ಪಂದ್ಯವು 12 ರಿಂದ 16 ರವರೆಗೆ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. 3ನೇ ಟೆಸ್ಟ್ ಪಂದ್ಯವು 25 ರಿಂದ 29 ರವರೆಗೆ ಹೆಡಿಂಗ್ಲೆ ಮೈದಾನದಲ್ಲಿ ಜರುಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸೆಪ್ಟೆಂಬರ್ 2 ರಿಂದ ಚಾಲನೆ ದೊರೆಯಲಿದ್ದು, ಅಂತಿಮ ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಸೆಪ್ಟೆಂಬರ್ 10 ರಿಂದ 14ರವರೆಗೆ ನಡೆಯಲಿದೆ.
ಇದನ್ನೂ ಓದಿ: ಇದಪ್ಪಾ ಸೇಡು ಅಂದ್ರೆ!; ಶ್ರೀಲಂಕಾ ವಿರುದ್ದ ಭಾರತ ಸೋತು ಎಷ್ಟು ವರ್ಷಗಳಾಗಿವೆ ಗೊತ್ತಾ..?
ಇದನ್ನೂ ಓದಿ: ಕೃನಾಲ್ ಪಾಂಡ್ಯ ವರ್ತನೆಯಲ್ಲಿ ಸಖತ್ ಬದಲಾವಣೆ! ಇದು ರಾಹುಲ್ ದ್ರಾವಿಡ್ ಎಫೆಕ್ಟ್ ಎಂದ ನೆಟ್ಟಿಗರು; ವಿಡಿಯೋ
Published On - 6:05 pm, Tue, 20 July 21