Ind vs Eng 2nd Test: ಲಾರ್ಡ್ಸ್​ ಮೈದಾನದಲ್ಲಿ ಯಾರು ಬಲಿಷ್ಠ? ಸೇಡು ತೀರಿಸಿಕೊಳ್ಳಲಿದೆಯಾ ಕೊಹ್ಲಿ ಪಡೆ

| Updated By: ಝಾಹಿರ್ ಯೂಸುಫ್

Updated on: Aug 12, 2021 | 3:12 PM

England vs India 2nd Test: ಈ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ 18 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಇಂಗ್ಲೆಂಡ್ ತಂಡವು 12 ಬಾರಿ ಗೆಲುವು ದಾಖಲಿಸಿ ಪಾರುಪತ್ಯ ಮೆರೆದಿದೆ. ಹಾಗೆಯೇ 2 ಪಂದ್ಯಗಳನ್ನು ಭಾರತ ಗೆದ್ದರೆ, 4 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು.

Ind vs Eng 2nd Test: ಲಾರ್ಡ್ಸ್​ ಮೈದಾನದಲ್ಲಿ ಯಾರು ಬಲಿಷ್ಠ? ಸೇಡು ತೀರಿಸಿಕೊಳ್ಳಲಿದೆಯಾ ಕೊಹ್ಲಿ ಪಡೆ
ಅರೆರೇ..ಇನ್ನು ಕೂಡ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಮುಗಿದಿಲ್ಲ ಮತ್ತೇನು ಸೆಲೆಬ್ರೇಷನ್ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡುತ್ತೆ. ಆದರೆ ಈ ಸಂಭ್ರಮ ಹಾಗೆ ಸುಮ್ಮನೆ.
Follow us on

ಕ್ರಿಕೆಟ್ ಕಾಶಿ ಲಾರ್ಡ್ಸ್ (Lords)​ ಮೈದಾನದಲ್ಲಿ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ (India vs England 2nd Test) ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಮೊದಲ ಪಂದ್ಯದ ಡ್ರಾದಿಂದ ಹತಾಶರಾಗಿರುವ ಟೀಮ್ ಇಂಡಿಯಾ, 2ನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವ ವಿಶ್ವಾಸದಲ್ಲಿದೆ. ಅತ್ತ ಆತಿಥೇಯ ಇಂಗ್ಲೆಂಡ್ ಪ್ರತಿಷ್ಠಿತ ಮೈದಾನದಲ್ಲಿ ಜಯ ಸಾಧಿಸಿ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಪಡೆಯುವ ಇರಾದೆಯಲ್ಲಿದೆ. 2018 ರಲ್ಲಿ ಟೀಮ್ ಇಂಡಿಯಾ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ದ ಕೊನೆಯ ಬಾರಿ ಆಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು ಇನಿಂಗ್ಸ್ ಮತ್ತು 159 ರನ್​ಗಳಿಂದ ಮಣಿಸಿತ್ತು. ಇದೀಗ ಮೂರು ವರ್ಷಗಳ ಹಿಂದಿನ ಹೀನಾಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ವಿರಾಟ್ ಕೊಹ್ಲಿ ಪಡೆ. ಆದರೆ ಈ ಮೈದಾನದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಭಾರತಕ್ಕೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಏಕೆಂದರೆ ಲಾರ್ಡ್ಸ್​ ಮೈದಾನದಲ್ಲಿ ಈ ಹಿಂದಿನಿಂದಲೂ ಇಂಗ್ಲೆಂಡ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಪ್ರವಾಸಿ ತಂಡಗಳು ಈ ಮೈದಾನದಲ್ಲಿ ಜಯ ಸಾಧಿಸಿದ್ದು ಕೂಡ ತುಂಬಾ ವಿರಳ. ಲಾರ್ಡ್ಸ್​ ಮೈದಾನದ ಅಂಕಿ ಅಂಶಗಳನ್ನು ಗಮನಿಸುವುದಾದರೆ…

ಲಾರ್ಡ್ಸ್​ನಲ್ಲಿ ಆಡಿದ ಒಟ್ಟು ಟೆಸ್ಟ್ ಪಂದ್ಯಗಳು: 140

ಇಂಗ್ಲೆಂಡ್ ಗೆದ್ದ ಪಂದ್ಯಗಳು: 55

ಪ್ರವಾಸಿ ತಂಡಗಳು ಗೆದ್ದ ಪಂದ್ಯಗಳು: 32

ಡ್ರಾನಲ್ಲಿ ಅಂತ್ಯಗೊಂಡ ಪಂದ್ಯಗಳು: 51

ಅಂದರೆ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು 106 ಪಂದ್ಯಗಳಲ್ಲಿ ಹಿಡಿತ ಸಾಧಿಸಿದೆ ಎಂದೇ ಹೇಳಬಹುದು. ಹಾಗೆಯೇ ಎದುರಾಳಿ ವಿರುದ್ದ ಮಂಡಿಯೂರಿದ್ದು ಕೇವಲ 32 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಲಾರ್ಡ್ಸ್​ ಮೈದಾನವನ್ನು ಆಂಗ್ಲ ಕ್ರಿಕೆಟಿಗರ ಅದೃಷ್ಟದ ಮೈದಾನ ಎಂದು ಪರಿಗಣಿಸಲಾಗುತ್ತದೆ.

ಇನ್ನು ಈ ಮೈದಾನದಲ್ಲಿ ಮೂಡಿ ಬಂದ ಒಟ್ಟಾರೆ ಪ್ರದರ್ಶನದ ಅಂಕಿ ಅಂಶಗಳನ್ನು ನೋಡುವುದಾದರೆ…

ಅತ್ಯಧಿಕ ವೈಯಕ್ತಿಕ ಸ್ಕೋರ್: 333 ರನ್- ಗ್ರಹಾಂ ಗೂಚ್ (ಇಂಗ್ಲೆಂಡ್) vs ಭಾರತ, 1990

ಅತ್ಯುತ್ತಮ ಬೌಲಿಂಗ್ (ಇನ್ನಿಂಗ್ಸ್): 8/34 – ಇಯಾನ್ ಬೋಥಮ್ (ಇಂಗ್ಲೆಂಡ್) vs ಪಾಕಿಸ್ತಾನ, 1978

ಅತ್ಯುತ್ತಮ ಬೌಲಿಂಗ್ (ಪಂದ್ಯ): 16/137 – ರಾಬರ್ಟ್ ಮಾಸ್ಸಿ (ಆಸ್ಟ್ರೇಲಿಯಾ) vs ಇಂಗ್ಲೆಂಡ್, 1972

ಅತ್ಯಧಿಕ ತಂಡದ ಸ್ಕೋರ್: 729/6 – ಆಸ್ಟ್ರೇಲಿಯಾ vs ಇಂಗ್ಲೆಂಡ್, 1930

ಕಡಿಮೆ ತಂಡದ ಸ್ಕೋರ್: 38 – ಐರ್ಲೆಂಡ್ vs ಇಂಗ್ಲೆಂಡ್, 2019

ಅತ್ಯುನ್ನತ ಯಶಸ್ವಿ ರನ್ ಚೇಸ್: 344/1 – ವೆಸ್ಟ್ ಇಂಡೀಸ್ vs ಇಂಗ್ಲೆಂಡ್, 1984

ಇನ್ನು ಈ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ 18 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಇಂಗ್ಲೆಂಡ್ ತಂಡವು 12 ಬಾರಿ ಗೆಲುವು ದಾಖಲಿಸಿ ಪಾರುಪತ್ಯ ಮೆರೆದಿದೆ. ಹಾಗೆಯೇ 2 ಪಂದ್ಯಗಳನ್ನು ಭಾರತ ಗೆದ್ದರೆ, 4 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು.

ಇನ್ನು ಪ್ರಸ್ತುತ ಬ್ಯಾಟ್ಸ್‌ಮನ್‌ಗಳಲ್ಲಿ ಇಂಗ್ಲೆಂಡ್​ ನಾಯಕ ಜೋ ರೂಟ್ ಲಾರ್ಡ್ಸ್‌ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಈ ಪಿಚ್​ನಲ್ಲಿ ಆಡಿದ 28 ಇನ್ನಿಂಗ್ಸ್‌ಗಳಲ್ಲಿ 1,271 ರನ್ ಗಳಿಸಿದ್ದಾರೆ.

ಇನ್ನು2014 ರಲ್ಲಿ ಲಾರ್ಡ್ಸ್‌ನಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಶತಕ ಗಳಿಸಿದ್ದರು. ಹೀಗಾಗಿ 2ನೇ ಟೆಸ್ಟ್‌ನಲ್ಲೂ ರಹಾನೆಯಿಂದ ಇದೇ ರೀತಿಯ ಪ್ರದರ್ಶನವನ್ನು ಭಾರತ ತಂಡವು ನಿರೀಕ್ಷಿಸುತ್ತಿದೆ.

ಲಾರ್ಡ್ಸ್‌ನಲ್ಲಿ ಟೆಸ್ಟ್‌ನಲ್ಲಿ ಪ್ರಸ್ತುತ ಭಾರತೀಯ ಬೌಲರ್‌ಗಳಲ್ಲಿ ಇಶಾಂತ್ ಶರ್ಮಾ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಇಶಾಂತ್ ಶರ್ಮಾ ಈ ಮೈದಾನದಲ್ಲಿ ಮೂರು ಟೆಸ್ಟ್‌ಗಳಿಂದ 12 ವಿಕೆಟ್ ಪಡೆದಿದ್ದಾರೆ.

ಆದರೆ ಮತ್ತೊಂದೆಡೆ ಇಂಗ್ಲೆಂಡ್ ವೇಗಿ ಜೇಮ್ಸ್ ಅಂಡರ್ಸನ್ ಲಾರ್ಡ್ಸ್​ನಲ್ಲಿ 100 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಅಂಡರ್ಸನ್ 24 ಟೆಸ್ಟ್‌ಗಳಿಂದ 105 ವಿಕೆಟ್ ಉರುಳಿಸಿ ಮಿಂಚಿದ್ದಾರೆ. ಹೀಗಾಗಿ ಈ ಮೈದಾನದಲ್ಲಿ ಇಂಗ್ಲೆಂಡ್ ಪಾಲಿನ ಟ್ರಂಪ್ ಕಾರ್ಡ್​ ಬ್ಯಾಟಿಂಗ್​ನಲ್ಲಿ ಜೋ ರೂಟ್ ಹಾಗೂ ಬೌಲಿಂಗ್​​ನಲ್ಲಿ ಜೇಮ್ಸ್​ ಅಂಡರ್ಸನ್ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು.

ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

(India vs England 2nd Test: Lord’s pitch history and Test records)