AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England 2nd Test: ಟಾಸ್ ಗೆದ್ದರೂ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಲು ಇದುವೇ ಮುಖ್ಯ ಕಾರಣ

Joe Root: ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು 106 ಪಂದ್ಯಗಳಲ್ಲಿ ಹಿಡಿತ ಸಾಧಿಸಿದೆ ಎಂದೇ ಹೇಳಬಹುದು. ಹಾಗೆಯೇ ಎದುರಾಳಿ ವಿರುದ್ದ ಮಂಡಿಯೂರಿದ್ದು ಕೇವಲ 32 ಪಂದ್ಯಗಳಲ್ಲಿ ಮಾತ್ರ.

India vs England 2nd Test: ಟಾಸ್ ಗೆದ್ದರೂ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಲು ಇದುವೇ ಮುಖ್ಯ ಕಾರಣ
India vs England 2nd Test
TV9 Web
| Updated By: ಝಾಹಿರ್ ಯೂಸುಫ್|

Updated on: Aug 12, 2021 | 6:22 PM

Share

ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಬೌಲಿಂಗ್ ಆಯ್ದುಕೊಂಡರು. ರೂಟ್ ಅವರ ಈ ನಿರ್ಧಾರವು ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಸಾಮಾನ್ಯವಾಗಿ ಲಾರ್ಡ್ಸ್​ ಮೈದಾನದಲ್ಲಿ ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡುತ್ತದೆ. ಆದರೆ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಇದಕ್ಕೇನು ಕಾರಣ ಎಂಬುದನ್ನೂ ಕೂಡ ರೂಟ್ ಅವರೇ ವಿವರಿಸಿದ್ದಾರೆ.

ಹೌದು, ನ್ಯಾಟಿಂಗ್​ಹ್ಯಾಮ್​ ಟೆಸ್ಟ್ ಪಂದ್ಯದ ಅಂತಿಮ ದಿನ ಮಳೆ ಬಂದಿದ್ದರಿಂದ ಭಾರತ ಗೆಲ್ಲಬೇಕಿದ್ದ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಲಾರ್ಡ್ಸ್​ನಲ್ಲೂ ಮಳೆ ಬರುವ ಸಾಧ್ಯತೆಯನ್ನು ಮೊದಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಊಹಿಸಿದ್ದರು. ಅವರ ಊಹೆಯಂತೆ ತುಂತುರು ಮಳೆಯ ಕಾರಣ ಪಂದ್ಯದ ಟಾಸ್ ಪ್ರಕ್ರಿಯೆ​ 20 ನಿಮಿಷ ವಿಳಂಬವಾಯಿತು. ಇತ್ತ ಟಾಸ್ ಗೆಲ್ಲುತ್ತಿದ್ದಂತೆ ರೂಟ್ ಕೂಡ ಬೌಲಿಂಗ್ ಆಯ್ದುಕೊಂಡರು.

ಮಳೆಯನ್ನು ಎದುರು ನೋಡಿದ್ದ ರೂಟ್ ತಮ್ಮ ತಂಡದಲ್ಲಿ ಮೂರು ಬದಲಾವಣೆಯನ್ನು ಕೂಡ ಮಾಡಿಕೊಂಡಿದ್ದರು. ಇದಕ್ಕೆ ಕಾರಣ, ಲಾರ್ಡ್ಸ್​ನಲ್ಲಿ ಮಳೆಯಾದರೆ ಪಿಚ್ ಪರಿಸ್ಥಿತಿ ಬದಲಾಗುವುದು. ಏಕೆಂದರೆ ಲಾರ್ಡ್ಸ್​ ಮೈದಾನದ ಪಿಚ್​ಗಳಲ್ಲಿ ಹುಲ್ಲುಗಳಿರುತ್ತವೆ. ಇತ್ತ ಹವಾಮಾನ ಬದಲಾವಣೆ ಹಾಗೂ ಮಳೆಯಿಂದ ಪಿಚ್​ ಮೇಲ್ಮೈ ಕೂಡ ಬದಲಾಗುತ್ತದೆ. ಹೀಗಾಗಿ ತಂಡದಲ್ಲಿ ಜಾಕ್ ಕ್ರೌಲಿಯ ಬದಲಾಗಿ ಹಸೀಬ್ ಹಮೀದ್, ಡೇನಿಯಲ್ ಲಾರೆನ್ಸ್ ಬದಲಿಗೆ ಮೊಯೀನ್ ಅಲಿ ಹಾಗೂ ಗಾಯಗೊಂಡಿರುವ ಸ್ಟುವರ್ಟ್ ಬ್ರಾಡ್ ಬದಲಿಗೆ ಮಾರ್ಕ್ ವುಡ್ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಿಕೊಂಡಿದ್ದರು.

ಲಾರ್ಡ್ಸ್​ ಮೈದಾನದಲ್ಲಿ ಚೆಂಡುಗಳು ತಿರುವು ಪಡೆದುಕೊಳ್ಳುತ್ತವೆ. ಅದರಲ್ಲೂ ಮಳೆಯಾದರೆ ಸ್ಪಿನ್ ಬೌಲಿಂಗ್​ಗೆ ಹೆಚ್ಚಿನ ಸಹಕಾರಿ. ಹೀಗಾಗಿಯೇ ನಾವು ಮೊಯೀನ್ ಅಲಿ ಅವರಿಗೆ ಅವಕಾಶ ನೀಡಿದ್ದೇವೆ. ಅವರು ಅನುಭವಿ ಸ್ಪಿನ್ನರ್ ಮತ್ತು ಬ್ಯಾಟಿಂಗ್​ನಲ್ಲೂ ರನ್ ಗಳಿಸುತ್ತಾರೆ. ಹಾಗೆಯೇ ಈ ಮೈದಾನದಲ್ಲಿ ವಿಕೆಟ್ ಕೂಡ ಪಡೆಯಲಿದ್ದಾರೆ ಎಂದು ಜೋ ರೂಟ್ ತಿಳಿಸಿದ್ದಾರೆ.

ಇದೀಗ ಮೊದಲ ದಿನವೇ ಲಾರ್ಡ್ಸ್​ನಲ್ಲಿ ಮಳೆಯಾಗಿದೆ. ಜೋ ರೂಟ್ ಅವರ ಊಹೆ ಕೂಡ ನಿಜವಾಗಿದೆ. ಪಿಚ್​​ನ ಪರಿಸ್ಥಿತಿ ಬದಲಾಗುವ ನಿರೀಕ್ಷೆಯಲ್ಲಿ ತಂಡವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನಿರೋದು ಟೀಮ್ ಇಂಡಿಯಾ ಹೇಗೆ ಆಡಲಿದೆ ಎಂಬುದು. ಒಂದು ವೇಳೆ ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಮೊದಲ ಇನಿಂಗ್ಸ್​ನಲ್ಲಿ ನಿಯಂತ್ರಿಸಿದರೆ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸುವ ಸಾಧ್ಯತೆಯಿದೆ. ಏಕೆಂದರೆ ಲಾರ್ಡ್ಸ್​ ಮೈದಾನದಲ್ಲಿ ಈ ಹಿಂದಿನಿಂದಲೂ ಇಂಗ್ಲೆಂಡ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಪ್ರವಾಸಿ ತಂಡಗಳು ಈ ಮೈದಾನದಲ್ಲಿ ಜಯ ಸಾಧಿಸಿದ್ದು ಕೂಡ ತುಂಬಾ ವಿರಳ. ಇದಕ್ಕೆ ಲಾರ್ಡ್ಸ್​ ಮೈದಾನದ ಅಂಕಿ ಅಂಶಗಳೇ ಸಾಕ್ಷಿ.

ಲಾರ್ಡ್ಸ್​ನಲ್ಲಿ ಆಡಿದ ಒಟ್ಟು ಟೆಸ್ಟ್ ಪಂದ್ಯಗಳು: 140

ಇಂಗ್ಲೆಂಡ್ ಗೆದ್ದ ಪಂದ್ಯಗಳು: 55

ಪ್ರವಾಸಿ ತಂಡಗಳು ಗೆದ್ದ ಪಂದ್ಯಗಳು: 32

ಡ್ರಾನಲ್ಲಿ ಅಂತ್ಯಗೊಂಡ ಪಂದ್ಯಗಳು: 51

ಅಂದರೆ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು 106 ಪಂದ್ಯಗಳಲ್ಲಿ ಹಿಡಿತ ಸಾಧಿಸಿದೆ ಎಂದೇ ಹೇಳಬಹುದು. ಹಾಗೆಯೇ ಎದುರಾಳಿ ವಿರುದ್ದ ಮಂಡಿಯೂರಿದ್ದು ಕೇವಲ 32 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಲಾರ್ಡ್ಸ್​ ಮೈದಾನವನ್ನು ಆಂಗ್ಲ ಕ್ರಿಕೆಟಿಗರ ಅದೃಷ್ಟದ ಮೈದಾನ ಎಂದು ಪರಿಗಣಿಸಲಾಗುತ್ತದೆ. ಇದೀಗ ಅದೃಷ್ಟದ ಮೈದಾನದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅಂದುಕೊಂಡಂತೆ ಎಲ್ಲವೂ ನಡೆದಿದೆ. ಹಾಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹೇಗೆ ಜಯಗಳಿಸಲಿದೆ ಎಂಬುದೇ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್: ಟೀಮ್ ಇಂಡಿಯಾ- ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ – ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್, ಮೊಯೀನ್ ಅಲಿ, ಸ್ಯಾಮ್ ಕರನ್, ಓಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಅಂಡರ್ಸನ್

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

(The reasons why Joe Root chose to bowl first at lords)