IND vs ENG: ಕುಲ್ದೀಪ್ ಕಮಾಲ್: ಇಂಗ್ಲೆಂಡ್ ಆಲೌಟ್

| Updated By: ಝಾಹಿರ್ ಯೂಸುಫ್

Updated on: Mar 07, 2024 | 2:46 PM

India vs England, 5th Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳು ಮುಗಿದಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದರೆ, ಉಳಿದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಇದೀಗ ಧರ್ಮಶಾಲಾದಲ್ಲಿ ಐದನೇ ಪಂದ್ಯ ನಡೆಯುತ್ತಿದೆ.

IND vs ENG: ಕುಲ್ದೀಪ್ ಕಮಾಲ್: ಇಂಗ್ಲೆಂಡ್ ಆಲೌಟ್
ಟೀಮ್ ಇಂಡಿಯಾ
Follow us on

ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಝಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 64 ರನ್ ಪೇರಿಸಿದ ಬಳಿಕ ಡಕೆಟ್ (27) ಕುಲ್ದೀಪ್ ಯಾದವ್​ಗೆ ವಿಕೆಟ್ ಒಪ್ಪಿಸಿದರು.

ಇದರ ಬೆನ್ನಲ್ಲೇ ಒಲೀ ಪೋಪ್ (11) ವಿಕೆಟ್ ಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು. ಇದಾಗ್ಯೂ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಝಾಕ್ ಕ್ರಾಲಿ ಆಕರ್ಷಕ ಅರ್ಧಶತಕ ಬಾರಿಸಿದರು.

ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಕುಲ್ದೀಪ್ ಯಾದವ್ ಡೇಂಜರಸ್ ಬ್ಯಾಟರ್ ಝಾಕ್ ಕ್ರಾಲಿ (79) ಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಜಾನಿ ಬೈರ್​ಸ್ಟೋವ್ (29) ಹಾಗೂ ಜೋ ರೂಟ್ (26) ವಿಕೆಟ್ ಒಪ್ಪಿಸಿದರು.

ಕೇವಲ 175 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಲು ಈ ಹಂತದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್​ ಕಣಕ್ಕಿಳಿದರು. ಆದರೆ ಕುಲ್ದೀಪ್ ಯಾದವ್ ಎಸೆದ ಮ್ಯಾಜಿಕಲ್ ಡೆಲಿವರಿಯನ್ನು ಗುರುತಿಸುವಲ್ಲಿ ಎಡವಿದ ಸ್ಟೋಕ್ಸ್​ (0) ಶೂನ್ಯಕ್ಕೆ ಔಟಾಗಿ ಬಂದ ವೇಗದಲ್ಲೇ ಹಿಂತಿರುಗಿದರು. ಈ ವಿಕೆಟ್​ನೊಂದಿಗೆ ಕುಲ್ದೀಪ್ ಯಾದವ್ 5 ವಿಕೆಟ್​ಗಳ ಸಾಧನೆ ಮಾಡಿದರು.

ಆ ಬಳಿಕ ಬಂದ ಟಾಮ್ ಹಾರ್ಟ್ಲಿ (6) ಹಾಗೂ ಮಾರ್ಕ್​ ವುಡ್​ನ (0) ಔಟ್ ಮಾಡುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು. ಅಂತಿಮವಾಗಿ ಇಂಗ್ಲೆಂಡ್ ತಂಡವು 218 ರನ್​ಗಳಿಸಿ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಉತ್ತಮ ಸ್ಪಿನ್ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು.

ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್, ಝಾಕ್ ಕ್ರಾಲಿ, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೊಯೆಬ್ ಬಶೀರ್, ಜೇಮ್ಸ್ ಅ್ಯಂಡರ್ಸನ್, ಮಾರ್ಕ್ ವುಡ್.