IND vs ENG: ಕಣಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ ಬೆನ್ ಸ್ಟೋಕ್ಸ್
India vs England 3rd Test: ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ಪಂದ್ಯದ ಮೂಲಕ ಬೆನ್ ಸ್ಟೋಕ್ಸ್ ವಿಶೇಷ ದಾಖಲೆ ಬರೆದಿದ್ದಾರೆ. ಈ ದಾಖಲೆಯೊಂದಿಗೆ ಈ ಸಾಧನೆ ಮಾಡಿದ ವಿಶ್ವದ 76ನೇ ಆಟಗಾರ ಎಂಬ ಹೆಗ್ಗಳಿಕೆಗೂ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ.
Updated on: Feb 15, 2024 | 11:22 AM

ಟೀಮ್ ಇಂಡಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ಗೆ ಆಗಮಿಸುತ್ತಿದ್ದಂತೆ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಸಾಧಕರ ಪಟ್ಟಿಗೆ ಸ್ಟೋಕ್ಸ್ ಸೇರ್ಪಡೆಯಾದರು.

ಈ ಮೂಲಕ ಈ ಸಾಧನೆ ಮಾಡಿದ 16ನೇ ಇಂಗ್ಲೆಂಡ್ ಆಟಗಾರ ಹಾಗೂ ವಿಶ್ವದ 76ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಮೊದಲ ಆಟಗಾರ ಕಾಲಿನ್ ಕೌಡ್ರೆ.

1968 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಾಲಿನ್ ಕೌಡ್ರೆ ಈ ಸಾಧನೆ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದರು.

ಇಂಗ್ಲೆಂಡ್ ಪರ 114 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾಲಿನ್ ಕೌಡ್ರೆ 188 ಇನ್ನಿಂಗ್ಸ್‌ಗಳಲ್ಲಿ 44.06 ಸರಾಸರಿಯಲ್ಲಿ 7624 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳನ್ನು ಹಾಗೂ 38 ಅರ್ಧಶತಕಗಳನ್ನೂ ಕೂಡ ಬಾರಿಸಿದ್ದಾರೆ.

ಇದೀಗ ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 16ನೇ ಆಟಗಾರನಾಗಿ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿದ್ದಾರೆ. ಇದುವರೆಗೆ 100 ಟೆಸ್ಟ್ನಲ್ಲಿ 179 ಇನಿಂಗ್ಸ್ ಆಡಿರುವ ಸ್ಟೋಕ್ಸ್ 6251 ರನ್ ಕಲೆಹಾಕಿದ್ದಾರೆ. ಈ ವೇಳೆ 1 ದ್ವಿಶತಕ, 13 ಶತಕ ಹಾಗೂ 31 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಅಷ್ಟೇ ಅಲ್ಲದೆ ಇದುವರೆಗೆ 197 ಟೆಸ್ಟ್ ವಿಕೆಟ್ಗಳನ್ನು ಕಬಳಿಸಿರುವ ಸ್ಟೋಕ್ಸ್ ಇದೀಗ 200 ವಿಕೆಟ್ಗಳ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಆದರೆ ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡದಿರುವ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಬೌಲ್ ಮಾಡಲಿದ್ದಾರಾ ಎಂಬುದೇ ಪ್ರಶ್ನೆ. ಒಂದು ವೇಳೆ ಬೌಲಿಂಗ್ ಮಾಡಿ 3 ವಿಕೆಟ್ ಕಬಳಿಸಿದರೆ 100ನೇ ಪಂದ್ಯದಲ್ಲಿ 200 ವಿಕೆಟ್ಗಳ ಸಾಧನೆ ಮಾಡಬಹುದು.

ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದಿದೆ. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಇಂಗ್ಲೆಂಡ್ ಬೌಲರ್ಗಳು ಯಶಸ್ವಿಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ (10), ಶುಭ್ಮನ್ ಗಿಲ್ ಹಾಗೂ ರಜತ್ ಪಾಟಿದಾರ್ (5) ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 22 ಓವರ್ಗಳ ಮುಕ್ತಾಯದ ವೇಳೆಗೆ 78 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.



















