ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಭಾರತದ ಪರ ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡಿದ 311ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ವಿಶೇಷ ಸಾಧಕರ ಪಟ್ಟಿಯಲ್ಲೂ ಸರ್ಫರಾಝ್ ಖಾನ್ ಕಾಣಿಸಿಕೊಂಡಿದ್ದಾರೆ. ಅಂದರೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 65 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಕಲೆಹಾಕಿ ಆ ಬಳಿಕ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ಕೆಲವೇ ಕೆಲವು ಆಟಗಾರರು ಮಾತ್ರ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 45 ಪಂದ್ಯಗಳನ್ನಾಡಿರುವ ಸರ್ಫರಾಝ್ 13 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 3692 ರನ್ ಪೇರಿಸಿದ್ದಾರೆ. ಅಂದರೆ 69.66 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಈ ಮೂಲಕ ಅತ್ಯುತ್ತಮ ಸರಾಸರಿಯೊಂದಿಗೆ ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ವಿಶೇಷ ಸಾಧಕರ ಪಟ್ಟಿಗೆ ಸರ್ಫರಾಝ್ ಸೇರ್ಪಡೆಯಾಗಿದ್ದಾರೆ.
ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ಸರಾಸರಿಯಲ್ಲಿ ರನ್ ಪೇರಿಸಿ ಟೀಮ್ ಇಂಡಿಯಾಗೆ ಪರ ಚೊಚ್ಚಲ ಪಂದ್ಯವಾಡಿದ ದಾಖಲೆ ರುಸಿ ಮೋದಿ ಹೆಸರಿನಲ್ಲಿದೆ. 40 ಮತ್ತು 50 ರ ದಶಕದಲ್ಲಿ ಭಾರತ ಪರ ಆಡಿದ್ದ ರುಸಿ ಚೊಚ್ಚಲ ಪಂದ್ಯಕ್ಕೂ ಮುನ್ನ 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 71.28 ಸರಾಸರಿ ರನ್ ಕಲೆಹಾಕಿದ್ದರು. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ 1989 ರಲ್ಲಿ ಪಾಕಿಸ್ತಾನ್ ವಿರುದ್ಧ ಪಾದಾರ್ಪಣೆ ಮಾಡುವ ಮೊದಲು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9 ಪಂದ್ಯಗಳಲ್ಲಿ 70.18 ಸರಾಸರಿಯಲ್ಲಿ ರನ್ ಗಳಿಸಿದ್ದರು.
ಇದೀಗ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿರುವ ಸರ್ಫರಾಝ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 69.66 ಸರಾಸರಿ ರನ್ ಗಳಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯುತ್ತಮ ಸರಾಸರಿಯಲ್ಲಿ ರನ್ ಕಲೆಹಾಕಿ ಆ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದ ವಿಶೇಷ ಸಾಧಕರ ಪಟ್ಟಿಗೆ ಸರ್ಫರಾಝ್ ಖಾನ್ ಸೇರ್ಪಡೆಯಾಗಿದ್ದಾರೆ.
Published On - 1:08 pm, Thu, 15 February 24