
ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲದೆಯೇ ಟೀಂ ಇಂಡಿಯಾ (Team India) ಓವಲ್ ಟೆಸ್ಟ್ ಪಂದ್ಯಕ್ಕಿಳಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಮೊಹಮ್ಮದ್ ಸಿರಾಜ್ (Mohammed Siraj
) ಹೆಗಲ ಮೇಲಿತ್ತು. ಈ ರೀತಿಯ ಜವಾಬ್ದಾರಿ ಪಡೆದಾಗ ಸಿರಾಜ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಈ ಹಿಂದೆಯೇ ಸಾಕಷ್ಟು ಭಾರಿ ಸಾಭೀತಾಗಿತ್ತು. ಆದರೆ ಓವಲ್ ಟೆಸ್ಟ್ (Oval Test) ಪಂದ್ಯ ಸಿರಾಜ್ಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಸಿರಾಜ್ಗೆ ಬೆಂಬಲವಾಗಿದಿದ್ದು, ಅನಾನುಭವಿಗಳಾದ ಆಕಾಶ್ ದೀಪ್ ಹಾಗೂ ಪ್ರಸಿದ್ಧ್ ಕೃಷ್ಣ. ಈ ಅನಾನುಭವಿಗಳನ್ನು ಕಟ್ಟಿಕೊಂಡು ದಾಳಿ ಮುಂದುವರೆಸಿದ ಸಿರಾಜ್, ಓವಲ್‌ನಲ್ಲಿ ಇತಿಹಾಸ ಸೃಷ್ಟಿಸಿದರು. ಎರಡು ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಬಳಿಸಿದ ಸಿರಾಜ್, ಈ ಪ್ರವಾಸವನ್ನು ಅತ್ಯಧಿಕ 23 ವಿಕೆಟ್ಗಳೊಂದಿಗೆ ಕೊನೆಗೊಳಿಸಿದರು.
ವಾಸ್ತವವಾಗಿ ಐದನೇ ದಿನದಾಟದಲ್ಲಿ ಮೊದಲು ಬೌಲಿಂಗ್ ಮಾಡಿದ ಪ್ರಸಿದ್ಧ್ ಒಂದೇ ಓವರ್ನಲ್ಲಿ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ನೀಡಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇಂತಹ ಸಂದರ್ಭದಲ್ಲಿ ದಾಳಿಗಿಳಿದ ಸಿರಾಜ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಕೇವಲ 2 ರನ್ ಗಳಿಸಿದ್ದ ಭರವಸೆಯ ಬ್ಯಾಟರ್ ಜೇಮೀ ಸ್ಮಿತ್, ಧ್ರುವ್ ಜುರೆಲ್ಗೆ ಕ್ಯಾಚ್ ನೀಡಿದರು. ಆ ಬಳಿಕ ಜೇಮೀ ಓವರ್ಟನ್ ಅವರನ್ನು ಎಲ್ಬಿಡಬ್ಲ್ಯೂ ಖೆಡ್ಡಕ್ಕೆ ಕೆಡುವಿದ ಸಿರಾಜ್ ತಂಡದ ಗೆಲುವಿನ ಭರವಸೆಯನ್ನು ಹೆಚ್ಚಿಸಿದರು. ನಂತರ ಭಾರತದ ಗೆಲುವಿಗೆ ಅಡ್ಡ ಗೋಡೆಯಾಗಿ ನಿಂತಿದ್ದ ಗಸ್ ಅಟ್ಕಿನ್ಸನ್ ಅವರನ್ನು ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಈ ವಿಕೆಟ್ ಭಾರತಕ್ಕೆ ಓವಲ್ ಟೆಸ್ಟ್‌ನಲ್ಲಿ ಜಯ ತಂದುಕೊಟ್ಟಿದ್ದು, ಮಾತ್ರವಲ್ಲದೆ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು.
ಪಂದ್ಯ ವಿಜೇತ ಪ್ರದರ್ಶನ ನೀಡಿದ ಬಳಿಕ ಮಾತನಾಡಿದ ಸಿರಾಜ್ ತುಂಬಾ ಭಾವುಕರಾಗಿ ಕಾಣಿಸಿಕೊಂಡರು. ನಂತರ ಮಾತು ಮುಂದುವರೆಸಿದ ಸಿರಾಜ್, ‘ನಾನು ಬೆಳಿಗ್ಗೆ ಎದ್ದ ಕೂಡಲೇ ನನ್ನ ಫೋನ್ನಿಂದ ಗೂಗಲ್ ಪರಿಶೀಲಿಸಿ ಬಿಲೀವ್ ಎಮೋಜಿಯನ್ನು ಡೌನ್ಲೌಡ್ ಮಾಡಿ ಅದನ್ನು ನನ್ನ ವಾಲ್‌ಪೇಪರ್ ಮಾಡಿಕೊಂಡೆ, ನಂತರ ದೇಶಕ್ಕಾಗಿ ಇದನ್ನು ನಾನು ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ. ನನಗೆ ಒಂದೇ ಒಂದು ಯೋಜನೆ ಇತ್ತು, ನಾನು ಸರಿಯಾದ ಜಾಗದಲ್ಲಿ ಚೆಂಡನ್ನು ಬೌಲ್ ಮಾಡಬೇಕು. ಈ ಯತ್ನದಲ್ಲಿ ನಾನು ವಿಕೆಟ್ ಪಡೆಯುತ್ತೇನೋ ಅಥವಾ ರನ್ ಕಳೆದುಕೊಳ್ಳುತ್ತೇನೋ ಅದು ಮುಖ್ಯವಾಗಿರಲಿಲ್ಲ ಎಂದರು.
IND vs ENG: ಕೊನೆಯ ವಿಕೆಟ್ ಉರುಳಿಸಿದ ಸಿರಾಜ್; ತಂಡದ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು ನೀವೇ ನೋಡಿ
ನಂತರ ಬ್ರೂಕ್ ಕ್ಯಾಚ್ ಅನ್ನು ಕೈಚೆಲ್ಲಿದ ಬಗ್ಗೆ ಸಿರಾಜ್ ಬಳಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿರಾಜ್, ‘ನಾನು ಚೆಂಡನ್ನು ಹಿಡಿದಾಗ, ನಾನು ಬೌಂಡರಿ ಮುಟ್ಟುತ್ತೇನೆ ಎಂದು ಭಾವಿಸಿರಲಿಲ್ಲ. ಅದು ಪಂದ್ಯವನ್ನು ಬದಲಾಯಿಸುವ ಕ್ಷಣವಾಗಿತ್ತು. ನಾಲ್ಕನೇ ದಿನದಂದು ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿದಿದ್ದರೆ ಪಂದ್ಯ ಈ ಹಂತಕ್ಕೆ ತಲುಪುತ್ತಿರಲಿಲ್ಲ. ನಾನು ಬ್ರೂಕ್ ಕ್ಯಾಚ್ ಹಿಡಿದಿದ್ದರೆ ಪಂದ್ಯ ಐದನೇ ದಿನ ತಲುಪುತ್ತಿರಲಿಲ್ಲ. ನಾನು ಮಾಡಿದ ತಪ್ಪು ನಿಜವಾಗಿಯೂ ನಮ್ಮ ತಂಡಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡಿತು. ಜೀವದಾನ ಸಿಕ್ಕ ಬಳಿಕ ಬ್ರೂಕ್ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ನಾನು ತಂಡವನ್ನು ಗೆಲ್ಲಿಸಬಲ್ಲೆ ಎಂದು ನಾನು ಯಾವಾಗಲೂ ನನ್ನ ಮೇಲೆ ನಂಬಿಕೆ ಇಟ್ಟಿದ್ದೆ. ಅಂತಿಮವಾಗಿ ನಾವು ಗೆದ್ದೆವು, ಅದು ಒಳ್ಳೆಯ ವಿಷಯ’ ಎಂದು ಸಿರಾಜ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ