
ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 471 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಇತ್ತ ಆತಿಥೇಯ ಇಂಗ್ಲೆಂಡ್ 465 ರನ್ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ಗೆ ಅಂತ್ಯ ಹಾಡಿದೆ. ಈ ಮೂಲಕ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 6 ರನ್ಗಳ ಮುನ್ನಡೆ ಸಿಕ್ಕಿದೆ. ವಾಸ್ತವವಾಗಿ ಇಂಗ್ಲೆಂಡ್ ಇಷ್ಟು ರನ್ ಬಾರಿಸುವ ಸಾಧ್ಯತೆಗಳಿರಲಿಲ್ಲ. ಆದರೆ ಟೀಂ ಇಂಡಿಯಾ ಮಾಡಿದ ತಪ್ಪುಗಳು ಇಂಗ್ಲೆಂಡ್ ತಂಡವನ್ನು ಈ ಬಲಿಷ್ಠ ಸ್ಥಿತಿಗೆ ತಂದಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್ಗಳ ಗೊಂಚಲು ಪಡೆದರು.
ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದ್ದ ಇಂಗ್ಲೆಂಡ್ ತಂಡ ಇಲ್ಲಿಂದ ತನ್ನ ಮೂರನೇ ದಿನದಾಟವನ್ನು ಆರಂಭಿಸಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭದಲ್ಲೇ ಪ್ರಸಿದ್ಧ್ ಕೃಷ್ಣ, ಶತಕ ಬಾರಿಸಿದ್ದ ಓಲಿ ಪೋಪ್ರನ್ನು ಔಟ್ ಮಾಡುವ ಮೂಲಕ ದಿನವನ್ನು ಉತ್ತಮವಾಗಿ ಆರಂಭಿಸಿದರು. ಆ ಬಳಿಕ ಬಂದ ನಾಯಕ ಬೆನ್ ಸ್ಟೋಕ್ಸ್, ಬ್ರೂಕ್ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರ ನಡುವೆ 50 ರನ್ಗಳ ಜೊತೆಯಾಟವೂ ಮೂಡಿತ್ತು. ಈ ವೇಳೆ ದಾಳಿಗಿಳಿದ ಸಿರಾಜ್, 20 ರನ್ ಬಾರಿಸಿದ್ದ ಸ್ಟೋಕ್ಸ್ರನ್ನು ಪೆವಿಲಿಯನ್ಗಟ್ಟುವ ಮೂಲಕ ಈ ಜೊತೆಯಾಟ ಮುರಿದರು.
ಸ್ಟೋಕ್ಸ್ ಬಳಿಕ ಬಂದ ಜೇಮಿ ಸ್ಮಿತ್ ಕೂಡ ಬ್ರೂಕ್ಸ್ಗೆ ಉತ್ತಮ ಸಾಥ್ ನೀಡಿ 40 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 300 ರನ್ಗಳ ಗಡಿ ದಾಟಿಸಿ ಪ್ರಸಿದ್ಧ್ ವಿಕೆಟ್ ಒಪ್ಪಿಸಿದರು. ಇದೇ ಹಂತದಲ್ಲಿ ಬ್ರೂಕ್ಗೆ ಎರಡನೇ ಜೀವದಾನವೂ ಸಿಕ್ಕಿತು. 46 ರನ್ಗಳಿದ್ದಾಗ ಸಿಕ್ಕ 2ನೇ ಜೀವದಾನವನ್ನು ಬಳಸಿಕೊಂಡ ಬ್ರೂಕ್ ಶತಕದತ್ತ ಸಾಗಿದರು. ಮತ್ತೊಮ್ಮೆ ಬ್ರೂಕ್ಗೆ 82 ರನ್ ಗಳಿಸಿದ್ದಾಗ ಮೂರನೇ ಜೀವದಾನವೂ ಸಿಕ್ಕಿತು. ಆದರೆ ಈ ಜೀವದಾನವನ್ನು ಶತಕವಾಗಿ ಪೂರೈಸಲು ಬ್ರೂಕ್ಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಬ್ರೂಕ್ 99 ರನ್ ಬಾರಿಸಿ ಕನ್ನಡಿಗ ಪ್ರಸಿದ್ಧ್ಗೆ ವಿಕೆಟ್ ಒಪ್ಪಿಸಿದರು.
IND vs ENG: ಸೊನ್ನೆಗೆ ಜೀವದಾನ ನೀಡಿ 99 ರನ್ಗಳ ದಂಡ ಕಟ್ಟಿದ ಟೀಂ ಇಂಡಿಯಾ
ಒಂದೆಡೆ ನಿಯಮಿತ ಅಂತರದಲ್ಲಿ ವಿಕೆಟ್ ಬೀಳುತ್ತಿದ್ದರೂ, ಹೊಡಿಬಡಿ ಆಟವನ್ನು ಮುಂದುವರೆಸಿದ ಇಂಗ್ಲೆಂಡ್ ಬಾಲಂಗೋಚಿಗಳು ತಂಡವನ್ನು 400 ರನ್ಗಳ ಗಡಿ ದಾಟಿಸಿದರು. ಕೊನೆಯಲ್ಲಿ ವೋಕ್ಸ್ 38 ರನ್, ಕಾರ್ಸೆ 25 ರನ್ ಟಾಂಗ್ 11 ರನ್ ಬಾರಿಸಿ ತಂಡವನ್ನು 465 ರನ್ಗಳಿಗೆ ಕೊಂಡೊಯ್ದರು. ಭಾರತದ ಪರ ಬುಮ್ರಾರನ್ನು ಹೊರತುಪಡಿಸಿ ಪ್ರಸಿದ್ಧ್ 3 ವಿಕೆಟ್, ಸಿರಾಜ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:25 pm, Sun, 22 June 25